
ನವದೆಹಲಿ: ‘ಆತ್ಮಾಹುತಿ ಬಾಂಬರ್ ಡಾ.ಉಮರ್ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತಿಳಿಸಿದೆ.
ವೈಟ್–ಕಾಲರ್ ಭಯೋತ್ಪಾದನೆ ಮತ್ತು ದೆಹಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿದ ಏಳನೇ ಆರೋಪಿ ಸೋಯಾಬ್. ಭಯೋತ್ಪಾದಕ ಕೃತ್ಯ ನಡೆಸಲು ನಬಿಗೆ ಆಶ್ರಯ ನೀಡಿದ್ದಲ್ಲದೇ, ಕೃತ್ಯಕ್ಕೆ ಬೇಕಾದ ಸರಕುಗಳನ್ನು ಒದಗಿಸಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
‘ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಭೀಕರ ದಾಳಿಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಆಯಾ ಪೊಲೀಸ್ ಪಡೆಗಳ ಸಮನ್ವಯದೊಂದಿಗೆ ವಿವಿಧ ರಾಜ್ಯಗಳಲ್ಲಿ ಶೋಧಗಳನ್ನು ನಡೆಸಲಾಗುತ್ತಿದೆ’ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಸಮೀಪ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು. ಕಾರಿನಲ್ಲಿ ಸ್ಪೋಟಕಗಳನ್ನು ಇರಿಸಿಕೊಂಡು ಬಂದಿದ್ದ ನಬಿ, ಮೆಟ್ರೊ ನಿಲ್ದಾಣದ ಬಳಿ ಸ್ಪೋಟಿಸಿದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.