ನವದೆಹಲಿ: ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (ಪಿಎಫ್‌ಐ) ದುಬೈನಿಂದ ಹಣಕಾಸು ಒದಗಿಸಲು ನೆರವಾದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಬಂಧಿಸಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜದ್ ಆಲಂ ಎಂಬುವರನ್ನು ಎನ್‌ಐಎ ತಂಡ ಶನಿವಾರ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಈತ ದುಬೈನಿಂದ ದೆಹಲಿಗೆ ಬಂದಿಳಿದ ಕೂಡಲೇ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಎನ್‌ಐಎ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಎಫ್‌ಐನ ತರಬೇತಿ ಪಡೆದ ಕಾರ್ಯಕರ್ತನಾದ ಆಲಂ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿತ್ತು. ಅಲ್ಲದೆ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಸಹ ಜಾರಿಯಾಗಿತ್ತು ಎಂದು ಎನ್‌ಐಎ ಹೇಳಿದೆ.
ಆರೋಪಿಯು ದುಬೈನಿಂದ ಬಿಹಾರದ ಪಿಎಫ್‌ಐ ಕಾರ್ಯಕರ್ತರಿಗೆ ಯುಎಇ, ಕರ್ನಾಟಕ ಮತ್ತು ಕೇರಳ ಮೂಲದ ಸಿಂಡಿಕೇಟ್‌ನಿಂದ ಅಕ್ರಮವಾಗಿ ಹಣ ರವಾನಿಸುವಲ್ಲಿ ತೊಡಗಿಸಿಕೊಂಡಿದ್ದ ಎಂದು ಪ್ರಕಟಣೆ ಮಾಹಿತಿ ನೀಡಿದೆ.
ಹೀಗೆ ದೊರೆತ ಹಣವನ್ನು ನಿಷೇಧಿತ ಸಂಘಟನೆ ಮೂಲಕ ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳನ್ನು ನಡೆಸಲು ಬಳಸಲಾಗುತ್ತಿತ್ತು ಎಂದು ಎನ್‌ಐಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.