ADVERTISEMENT

ಭಾರತದಲ್ಲಿ ದಾಳಿಗೆ ಸಂಚು: ಕೆನಡಾ ಮೂಲದ ಉಗ್ರನ ವಿರುದ್ಧ ಎನ್‌ಐಎ ಆರೊಪಪಟ್ಟಿ

ಪಿಟಿಐ
Published 25 ನವೆಂಬರ್ 2021, 15:11 IST
Last Updated 25 ನವೆಂಬರ್ 2021, 15:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆಗೊಳಿಸಿ ಭಾರತದಲ್ಲಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಕೆನಡಾದ ಭಯೋತ್ಪಾದಕನ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.

ಕೆನಡಾದ ಸರ್ರೆಯ ನಿವಾಸಿಯಾಗಿರುವ ಹರ್ದೀಪ್‌ ಸಿಂಗ್ ನಿಜ್ಜಾರ್‌ನ ಮೂಲ ಪಂಜಾಬ್‌ನ ಜಲಂಧರ್. ಈತನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ನಿಜ್ಜಾರ್‌, ನಿಷೇಧಿತ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌’ಗೆ (ಬಿಕೆಐ) ಸೇರಿದವನು. ಇತರರ ಜತೆ ಸೇರಿ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಈತ ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಈತ ಪಂಜಾಬ್‌ನಲ್ಲಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ. ಅದಕ್ಕೆ ಪೂರಕವಾಗಿ ಜಾಲ ನಿರ್ಮಿಸಿಕೊಂಡು, ಹವಾಲಾ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಭಾರತಕ್ಕೆ ಹಣ ರವಾನಿಸುತ್ತಿದ್ದ. ಅಲ್ಲದೆ ಪಾಕಿಸ್ತಾನ ಮೂಲದ ಸಹವರ್ತಿಗಳೊಂದಿಗೆ ಸೇರಿ ಉದ್ದೇಶಿತ ದುಷ್ಕ್ರತ್ಯಗಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆಗೊಳಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಿಖ್ಸ್‌ ಫಾರ್‌ ಜಸ್ಟೀಸ್‌’ ಸಂಘಟನೆ ಜತೆಗೂ ಸಂಬಂಧ ಹೊಂದಿರುವ ನಿಜ್ಜಾರ್‌, ‘ಖಾಲಿಸ್ತಾನ’ ರಚನೆಗಾಗಿ ವಿಶ್ವದಾದ್ಯಂತ ಸಿಖ್‌ ಸಮುದಾಯವನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದ. ಭಾರತ ಸರ್ಕಾರದ ವಿರುದ್ಧ ಆಂದೋಲನಗಳನ್ನು ರೂಪಿಸಲು ಈತ ಸಾಮಾಜಿಕ ಮಾಧ್ಯಮಗಳ ಮೂಲಕ ಸಿಖ್‌ ಸಮುದಾಯದವರನ್ನು ಪ್ರಚೋದಿಸುತ್ತಿದ್ದ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆತನನ್ನು ಭಯೋತ್ಪಾದಕ ಎಂದು ಗುರುತಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.