ADVERTISEMENT

ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು: ಕಾಶ್ಮೀರದಲ್ಲಿ ಎನ್‌ಐಎ ದಾಳಿ, ಆರು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 11:48 IST
Last Updated 11 ಜುಲೈ 2021, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಉಗ್ರರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಸಿಬ್ಬಂದಿ ಭಾನುವಾರ ಕಾಶ್ಮೀರದ ವಿವಿಧೆಡೆ ದಾಳಿ ನಡೆಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ ಕೂಡಾ ಸೇರಿದ್ದಾರೆ.

ಧಾರ್ಮಿಕ ಸಂಸ್ಥೆ ಸಿರಾಜ್‌ ಉಲ್‌ ಉಲೂಮ್‌ಗೆ ಸೇರಿದ ದಲಾಲ್‌ ಮೊಹಲ್ಲಾ, ನವಾಬ್‌ ಬಜಾರ್ ಮತ್ತು ಓಲ್ಡ್‌ ಸಿಟಿಯಲ್ಲಿ ಇರುವ, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ಎನ್‌ಐಎ ಮೂಲಗಳ ಪ್ರಕಾರ, ಉಗ್ರರ ಸಂಘಟನೆಗಳಿಗೆ ಹಣಕಾಸು ನೆರವು ಪ್ರಕರಣ ಸಂಬಂಧ ದಾಳಿ ನಡೆದಿದೆ.

ಉತ್ತರಪ್ರದೇಶದ ಇಸ್ಲಾಮಿಕ್‌ ಧಾರ್ಮಿಕ ಸಂಸ್ಥೆಯ ಮಾನ್ಯತೆ ಪಡೆದಿದ್ದ ಈ ಸಂಸ್ಥೆಯ ಅಧ್ಯಕ್ಷ ಅದ್ನನ್ ಅಹ್ಮದ್ ನದ್ವಿ ಅವರನ್ನು ಬಂಧಿಸಲಾಗಿದೆ. ದಾಳಿಗೆ ಸಿಆರ್‌ಪಿಎಫ್‌ ಸಿಬ್ಬಂದಿ, ಪೊಲೀಸರ ಸಹಯೋಗ ಪಡೆಯಲಾಗಿತ್ತು.

ADVERTISEMENT

ಅಲ್ಲದೆ, ಅನಂತನಾಗ್ ಜಿಲ್ಲೆಯಲ್ಲಿ ವಿವಿಧೆಡೆಯೂ ದಾಳಿ ನಡೆದಿದ್ದು, ವ್ಯಾಪಾರಿಗಳಾದ ಉಮರ್‌ ಭಟ್, ತನ್ವೀರ್ ಭಟ್, ಜಾವೇದ್‌ ಭಟ್‌, ವೈದ್ಯಕೀಯ ಪ್ರಯೋಗಾಲಯದ ತಂತ್ರಜ್ಞ ಒವೈಸಿ ಭಟ್, ಔಷಧ ವ್ಯಾಪಾರಿ ಜೀಶನ್ ಮಲಿಕ್‌ ಅವರನ್ನು ಬಂಧಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ವಿವಿಧೆಡೆ ಕೂಡ ದಾಳಿ ನಡೆಸಲಾಗಿದೆ.

ಬಂಧಿತರಿಂದ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಆಧಾರ್‌ ಕಾರ್ಡ್‌ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ದೇಶ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಪಾಕಿಸ್ತಾನ ಮೂಲದ ಹಿಜ್ಬುಲ್‌ ಮುಜಾಹಿದ್ದೀನ್‌ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌ ಅವರ ಇಬ್ಬರು ಪುತ್ರರು ಸೇರಿದಂತೆ 11 ನೌಕರರನ್ನು, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸರ್ಕಾರಿ ಸೇವೆಯಿಂದ ವಜಾ ಮಾಡಿದ್ದ ಹಿಂದೆಯೇ ಈ ದಾಳಿ ನಡೆದಿದೆ.

ಸಲಾಹುದ್ದೀನ್ ಅವರ ಪುತ್ರರಾದ ಸೈಯದ್ ಶಕೀಲ್‌ ಮತ್ತು ಸೈಯದ್ ಶಾಹೀದ್‌ ಅವರನ್ನು ಕ್ರಮವಾಗಿ ಉಗ್ರರಿಗೆ ಹಣಕಾಸು ನೆರವು ಆರೋಪದ ಮೇಲೆ ಕ್ರಮವಾಗಿ 2017 ಮತ್ತು 2020ರಲ್ಲಿ ಬಂಧಿಸಲಾಗಿತ್ತು. ಅಲ್ಲದೆ, ಆಗಸ್ಟ್‌ 29, 2018ರಂದು ತನಿಖಾ ಸಂಸ್ಥೆಯು ಕಾರಾಗೃಹದ ಉಪ ಸೂಪರಿಂಟೆಂಡೆಂಟ್‌ ಅನ್ನು ಶ್ರೀನಗರದ ಜೈಲಿನ ಒಳಗಡೆ ಸಂಚು ನಡೆಸಿದ್ದ ಪ್ರಕರಣ ಸಂಬಂಧ ಎನ್‌ಐಎ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.