ಕೊಚ್ಚಿ : ಭಯೋತ್ಪಾದಕ ಸಂಘಟನೆ ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದ ಕೊಯಮತ್ತೂರಿನ ಇಬ್ಬರನ್ನು ದೋಷಿಗಳು ಎಂದು ಎನ್‌ಐಎ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಕೊಯಮತ್ತೂರಿನ ಉಕ್ಕಡಂನ ಅನ್ಬು ನಗರದ ಮಹಮ್ಮದ್ ಅಜರುದ್ದೀನ್ (27) ಹಾಗೂ ದಕ್ಷಿಣ ಉಕ್ಕಡಂನ ಶೇಕ್ ಹಿದಾಯತುಲ್ಲಾ ಅಲಿಯಾಸ್ ಫಿರೋಜ್ ಖಾನ್ (35) ಶಿಕ್ಷೆಗೊಳಗಾದವರು.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಇಬ್ಬರೂ ಐಸಿಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ವಿಚಾರಣೆ ಸಮಯದಲ್ಲಿ ಅಪರಾಧಿಗಳಿಬ್ಬರೂ ತಮ್ಮ ಕುಟುಂಬದ ಪರಿಸ್ಥಿತಿಯನ್ನು ಉಲ್ಲೇಖಿಸಿ, ಶಿಕ್ಷೆ ಕಡಿಮೆ ಮಾಡುವಂತೆ ನ್ಯಾಯಾಲಯಕ್ಕೆ ವಿನಂತಿಸಿದ್ದಾರೆ.
ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದ್ದು, ಆರೋಪಿಗಳಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೊಚ್ಚಿಯ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಎನ್. ಶೇಷಾದ್ರಿನಾಥನ್ ಪೊಲೀಸರಿಗೆ ಸೂಚಿಸಿದ್ದಾರೆ.
ಐಸಿಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇವರಿಬ್ಬರ ವಿರುದ್ಧ ಮಾತ್ರ 2019ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.
ಎನ್‌ಐಎ ನ್ಯಾಯಾಲಯವು 40 ಸಾಕ್ಷ್ಯಗಳ ಪರಿಶೀಲನೆ ನಡೆಸಿತು. ಕೊಯಮತ್ತೂರಿನಲ್ಲೇ ನಡೆದಿದ್ದ ಸ್ಫೋಟಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಅಜರುದ್ದೀನ್ ಆರೋಪಿ ಆಗಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.