ADVERTISEMENT

ದಾವೂದ್‌ನ ಇಬ್ಬರು ಸಹಚರರ ಬಂಧನ

ಮುಂಬೈ, ಥಾಣೆಯ ವಿವಿಧೆಡೆ ಎನ್‌ಐಎ ದಾಳಿ

ಪಿಟಿಐ
Published 9 ಮೇ 2022, 12:27 IST
Last Updated 9 ಮೇ 2022, 12:27 IST
ಮುಂಬೈನಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ನಡೆಸಿದ ದಾಳಿಯಲ್ಲಿ ದಾವೂದ್ ಇಬ್ರಾಹಿಂನ ಸಹಚರ ಸಲೀಂ ಖುರೇಷಿಯನ್ನು  ಬಂಧಿಸಲಾಯಿತು –ಪಿಟಿಐ ಚಿತ್ರ
ಮುಂಬೈನಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ನಡೆಸಿದ ದಾಳಿಯಲ್ಲಿ ದಾವೂದ್ ಇಬ್ರಾಹಿಂನ ಸಹಚರ ಸಲೀಂ ಖುರೇಷಿಯನ್ನು  ಬಂಧಿಸಲಾಯಿತು –ಪಿಟಿಐ ಚಿತ್ರ   

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ವಿರುದ್ಧ ಮುಂಬೈ ಮತ್ತು ಥಾಣೆಯ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸೋಮವಾರ ನಡೆಸಿದ ದಾಳಿಯಲ್ಲಿ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್‌ ಹಾಗೂ ಮುಂಬೈನ ಹಾಜಿ ಅಲಿ ದರ್ಗಾ ಮತ್ತು ಮಾಹಿಮ್ ದರ್ಗಾದ ಟ್ರಸ್ಟಿ ಸೊಹೈಲ್ ಖಾಂಡ್ವಾನಿ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸೋಮವಾರ ಬೆಳಿಗ್ಗೆಯೇ ದಾಳಿ ನಡೆಸಿದ ಎನ್ಐಎ ದಕ್ಷಿಣ ಮುಂಬೈನ ಭೆಂಡಿ ಬಜಾರ್‌ ಪ್ರದೇಶದಲ್ಲಿ ಸಲೀಂ ನಿವಾಸದಲ್ಲಿಯೇ ಆತನನ್ನು ಬಂಧಿಸಿದೆ. ಸಲೀಂ, ಚೋಟಾ ಶಕೀಲ್‌ನ ಸೊಸೆಯ ಗಂಡ. ಮಾಹಿಮ್ ಪ್ರದೇಶದಲ್ಲಿನ ನಿವಾಸದಲ್ಲಿ ಸೊಹೈಲ್ ಖಾಂಡ್ವಾನಿಯನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ದಾವೂದ್ ಇಬ್ರಾಹಿಂ ಸಹಚರರನ್ನು ಗುರಿಯಾಗಿಸಿಕೊಂಡು ಅವರು ನೆಲೆಸಿರುವ ಮುಂಬೈನ ನಾಗ್ಪಾಡಾ ಪ್ರದೇಶ, ಭೆಂಡಿ ಬಜಾರ್, ಸಾಂತಾಕ್ರೂಜ್, ಮಾಹಿಮ್, ಮುಂಬೈನ ಗೋರೆಗಾಂವ್ ಪ್ರದೇಶ, ಥಾಣೆಯ ಮುಂಬ್ರಾ ಮತ್ತು ಇತರ ಸ್ಥಳಗಳಲ್ಲಿರುವ ಹೌಸಿಂಗ್ ಸೊಸೈಟಿ ಮೇಲೆ ಎನ್ಐಎ ದಾಳಿ ನಡೆಸಿದೆ.

ADVERTISEMENT

ಎನ್‌ಐಎ ಅಧಿಕಾರಿಗಳ ತಂಡವು ಖಾಂಡ್ವಾನಿ ಅವರ ಮಾಹಿಮ್ ಮೂಲದ ಕಚೇರಿಯಲ್ಲೂ ಶೋಧ ಕಾರ್ಯ ನಡೆಸಿದ್ದು, ಬಿಲ್ಡರ್ ಅಸ್ಲಾಂ ಸೊರಾಟಿಯಾ ಮತ್ತು ಗೋಮಾಂಸ ರಫ್ತುದಾರ ಫರೀದ್ ಖುರೇಷಿ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಿದೆ. ಬೊರಿವಲಿ ಪ್ರದೇಶದಲ್ಲಿರುವ ಬುಕ್ಕಿ-ಬಿಲ್ಡರ್ ಅಜಯ್ ಗೊಸಾಲಿಯಾ ಅವರ ನಿವಾಸದಲ್ಲೂ ಎನ್ಐಎ ಶೋಧ ನಡೆಸಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಹಲವು ಹವಾಲಾ ಆಪರೇಟರ್‌ಗಳು ಮತ್ತು ಡ್ರಗ್ ಪೆಡ್ಲರ್‌ಗಳು ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಹೊಂದಿದ್ದರು. ಫೆಬ್ರುವರಿಯಲ್ಲಿ ದಾವೂದ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲೀಂ ಖುರೇಷಿಯನ್ನು ವಿಚಾರಣೆಗೆ ಒಳಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.