ಎನ್ಐಎ ವಶದಲ್ಲಿರುವ ರಾಣಾ
ಚಿತ್ರ ಕೃಪೆ: DOJCrimDiv
ನವದೆಹಲಿ: ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶದಲ್ಲಿರುವ ಮುಂಬೈ ದಾಳಿ ಮಾಸ್ಟರ್‌ಮೈಂಡ್ ತಹವ್ವುರ್ ರಾಣಾನನ್ನು ಪ್ರತಿದಿನ 8 ರಿಂದ 10 ಗಂಟೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಅಮೆರಿಕದಿಂದ ಗಡೀಪಾರಾಗಿ ಬಂದ ರಾಣಾನನ್ನು ಶುಕ್ರವಾರ ದೆಹಲಿ ನ್ಯಾಯಾಲಯ ವಿಚಾರಣೆಗಾಗಿ 18 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿದೆ.
2008ರಲ್ಲಿ ನಡೆದ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಪೂರ್ಣ ಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಣಾಗೆ ಪ್ರತಿದಿನ 8 ರಿಂದ 10 ಗಂಟೆ ಎನ್ಐಎ ಅಧಿಕಾರಿಗಳು ಗ್ರಿಲ್ ಮಾಡುತ್ತಿದ್ದಾರೆ. ರಾಣಾನನ್ನು ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸುತ್ತಿದ್ದಾರೆ, ಆತನಿಗೆ ತನ್ನ ವಕೀಲರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿದ್ದಾರೆ. ‘ವಿಚಾರಣೆಯ ಸಂದರ್ಭದಲ್ಲಿ ರಾಣಾ ಸಹಕಾರ ನೀಡುತ್ತಿದ್ದಾನೆ’ ಎಂದು ಮೂಲಗಳು ಹೇಳಿವೆ. ಮುಖ್ಯ ತನಿಖಾ ಅಧಿಕಾರಿ ಜಯಾ ರಾಯ್ ನೇತೃತ್ವದ ತಂಡವು ಆತನ ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ರಾಣಾ ಮೂರು ವಸ್ತುಗಳನ್ನು ಮಾತ್ರ ಕೇಳಿದ್ದಾನೆ. ಪೆನ್ನು, ಕಾಗದದ ಹಾಳೆಗಳು ಮತ್ತು ಕುರಾನ್ ಪ್ರತಿಯನ್ನು ಆತ ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ನಿರ್ದಿಷ್ಟವಾಗಿ ಇದೇ ಆಹಾರ ಬೇಕು ಎಂದು ಆತ ಕೇಳಿಲ್ಲ, ಯಾವುದೇ ಆರೋಪಿಗೆ ನೀಡುವ ಆಹಾರವನ್ನೇ ಆತನಿಗೂ ನೀಡಲಾಗುತ್ತಿದೆ.
ಡೇವಿಡ್ ಕೊಲೆಮನ್ ಹೆಡ್ಲಿ ಜೊತೆಗೆ ನಡೆಸಿದ ದೂರವಾಣಿ ಕರೆಗಳ ಬಗ್ಗೆ ಸೇರಿ ತನಿಖೆ ವೇಳೆ ಸಿಕ್ಕ ಪ್ರಮುಖ ಅಂಶಗಳ ಕುರಿತು ರಾಣಾನನ್ನು ಪ್ರಶ್ನಿಸಲಾಗುತ್ತಿದೆ.
ರಾಣಾನನ್ನು ಎನ್‌ಐಎ ಮುಖ್ಯ ಕಚೇರಿಯಲ್ಲಿ ಅತಿಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದೆ.
ರಾಜಧಾನಿಯ ಮೇಲೆ ದಾಳಿಗೆ ಸಂಚು?
ತಹವ್ವುರ್ ಹುಸೇನ್ ರಾಣಾ ಮುಂಬೈ ಮೇಲೆ ನಡೆಸಿದ ದಾಳಿಯ ಮಾದರಿಯಲ್ಲೇ ನವದೆಹಲಿಯ ಮೇಲೆಯೂ ದಾಳಿ ನಡೆಸಲು ಯೋಜಿಸಿದ್ದ. ‘ಪಿತೂರಿಯು ಭಾರತದ ಭೌತಿಕ ಗಡಿಗಳನ್ನು ಮೀರಿ ನಿಲ್ಲುತ್ತದೆ. ಭಾರತದ ರಾಜಧಾನಿ ಸೇರಿದಂತೆ ಹಲವು ಸ್ಥಳಗಳನ್ನು ದಾಳಿಗೆ ಗುರುತಿಸಲಾಗಿತ್ತು’ ಎಂದು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಜೀತ್ ಸಿಂಗ್ ಅವರು ಏಪ್ರಿಲ್ 10ರಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.