ADVERTISEMENT

ಶ್ರೀನಗರ: 16 ಸ್ಥಳಗಳಲ್ಲಿ ಎನ್‌ಐಎ ದಾಳಿ

ಐಎಸ್‌ಐಎಸ್‌–ಐಇಡಿ ಪ್ರಕರಣಗಳ ಸಂಬಂಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 11:31 IST
Last Updated 10 ಅಕ್ಟೋಬರ್ 2021, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕಾಶ್ಮೀರದ 16 ಸ್ಥಳಗಳಲ್ಲಿ ಭಾನುವಾರ ದಾಳಿ ನಡೆಸಿದ್ದಾರೆ. ಜಮ್ಮು–ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರು ಈ ಕಾರ್ಯಾಚರಣೆಗೆ ಭದ್ರತೆ ಒದಗಿಸಿದ್ದಾರೆ.

‘ಐಎಸ್‌ಐಎಸ್‌ ವಾಯ್ಸ್‌ ಆಫ್‌ ಹಿಂದ್‌’ ಹಾಗೂ ‘ಬಠಿಂಡಿ ಐಇಡಿ ವಶ’ ಪ್ರಕರಣಗಳಿಗೆ ಸಂಬಂಧಿಸಿ ಶ್ರೀನಗರ, ಅನಂತನಾಗ್, ಕುಲ್ಗಾಮ್‌, ಬಾರಾಮುಲ್ಲಾ ಹಾಗೂ ಸೊಪೋರ್‌ಗಳಲ್ಲಿ ಎನ್ಐಎ ಈ ಕಾರ್ಯಾಚರಣೆ ಕೈಗೊಂಡಿತ್ತು.

ಶಂಕಿತರ ಬಳಿ ಇದ್ದ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ ಹಾಗೂ ಹಲವಾರು ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ದಿ ರೆಸಿಸ್ಟನ್ಸ್‌ ಫ್ರಂಟ್‌’ (ಟಿಆರ್‌ಎಫ್‌) ಸಂಘಟನೆಗೆ ಸಂಬಂಧಿಸಿದ ಸ್ಥಳಗಳ ಮೇಲೆ ಹಾಗೂ ಟಿಆರ್‌ಎಫ್‌ನ ಕಮಾಂಡರ್‌ ಸಜ್ಜಾದ್‌ ಗುಲ್‌ ಮನೆ ಮೇಲೂ ದಾಳಿ ನಡೆಸಲಾಗಿದೆ.

ಟಿಆರ್‌ಎಫ್‌ ಎಂಬುದು ಪಾಕಿಸ್ತಾನ ಮೂಲದ ಲಷ್ಕರ್‌–ಎ–ತಯಬಾದ ಘಟಕ ಎನ್ನಲಾಗಿದ್ದು, ಪಾಕಿಸ್ತಾನದಲ್ಲಿದ್ದುಕೊಂಡೇ ಸಜ್ಜಾದ್‌ ಗುಲ್ ಈ ಸಂಘಟನೆಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗಿದೆ.

ಭಾರತದ ವಿರುದ್ಧ ಯುದ್ಧ ಸಾರುವ ಸಲುವಾಗಿ ಐಎಸ್‌ಐಎಸ್‌ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳಿವೆ. ಐಎಸ್‌ಐಎಸ್‌ನ ಈ ಪಿತೂರಿಯನ್ನು ‘ಐಎಸ್‌ಐಎಸ್‌ ವಾಯ್ಸ್‌ ಆಫ್‌ ಹಿಂದ್’ ಎನ್ನಲಾಗುತ್ತದೆ.

‘ವಾಯ್ಸ್‌ ಆಫ್‌ ಹಿಂದ್‌’ ಎಂಬ ಆನ್‌ಲೈನ್‌ ಮಾಸಪತ್ರಿಕೆಯನ್ನು ಸಹ ಐಎಸ್‌ಐಎಸ್‌ ಪ್ರಕಟಿಸುತ್ತಿದೆ. ಈ ಮಾಸಪತ್ರಿಕೆಯಲ್ಲಿ ಭಾರತ ಕೇಂದ್ರಿತ ವಿಷಯಗಳೇ ಇರುತ್ತವೆ. ಮುಸ್ಲಿಂ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡುವಲ್ಲಿ ಈ ಆನ್‌ಲೈನ್‌ ಪತ್ರಿಕೆ ಮುಂಚೂಣಿಯಲ್ಲಿದೆ ಎಂದು ಎನ್‌ಐಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.