ADVERTISEMENT

ಪಂಜಾಬ್‌ನಲ್ಲಿ ಏ.30ರ ವರೆಗೂ ರಾತ್ರಿ ಕರ್ಫ್ಯೂ, ರಾಜಕೀಯ ಸಭೆಗಳಿಗೂ ನಿಷೇಧ

ಏಜೆನ್ಸೀಸ್
Published 7 ಏಪ್ರಿಲ್ 2021, 9:55 IST
Last Updated 7 ಏಪ್ರಿಲ್ 2021, 9:55 IST
ಅಮೃತಸರದಲ್ಲಿ ಮಾಸ್ಕ್‌ ಧರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು ಮಕ್ಕಳಿಗೆ ಮಾಸ್ಕ್‌ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ
ಅಮೃತಸರದಲ್ಲಿ ಮಾಸ್ಕ್‌ ಧರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳು ಮಕ್ಕಳಿಗೆ ಮಾಸ್ಕ್‌ ಹಾಕುತ್ತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ನಲ್ಲಿ ಏಪ್ರಿಲ್‌ 30ರ ವರೆಗೂ ರಾತ್ರಿ ಕರ್ಫ್ಯೂ ವಿಸ್ತರಿಸಲಾಗಿದ್ದು, ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೂ ನಿರ್ಬಂಧ ಜಾರಿಯಲ್ಲಿರಲಿದೆ. ಇದರೊಂದಿಗೆ ರಾಜಕೀಯ ಸಭೆಗಳನ್ನೂ ನಿಷೇಧಿಸಿ ಸರ್ಕಾರ ಆದೇಶಿಸಿದೆ.

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಂಜಾಬ್‌ ಸರ್ಕಾರ ಬುಧವಾರ ಹಲವು ಕ್ರಮಗಳನ್ನು ಪ್ರಕಟಿಸಿದೆ.

ಈ ಹಿಂದೆ ಪಂಜಾಬ್‌ನ 12 ಜಿಲ್ಲೆಗಳಿಗೆ ಮಾತ್ರ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ, ಈಗ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ರಾಜಕೀಯ ಸಭೆಗಳನ್ನೂ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘನೆಯಾದರೆ, ರಾಜಕೀಯ ಮುಖಂಡರನ್ನೂ ಒಳಗೊಂಡಂತೆ 'ವಿಪತ್ತು ನಿರ್ವಹಣಾ ಕಾಯ್ದೆ' ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಹೇಳಿದೆ.

ADVERTISEMENT

ಅಂತ್ಯ ಸಂಸ್ಕಾರ, ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಒಳಾಂಗಣದಲ್ಲಿ 50 ಜನರ ಮಿತಿ ಹಾಗೂ ಹೊರಾಂಗಣದಲ್ಲಿ 100 ಜನರಿಗೆ ಭಾಗಿಯಾಗಲು ಅವಕಾಶವಿದೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್‌ 30ರ ವರೆಗೂ ಶಾಲೆ, ಕಾಲೇಜುಗಳು ಮುಚ್ಚಿರಲಿವೆ.

ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ ಶೇ 85ರಷ್ಟು ಪ್ರಕರಣಗಳಲ್ಲಿ ಬ್ರಿಟನ್‌ ಮಾದರಿಯ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವುದು ಕಳವಳ ತಂದಿದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

ಚಿತ್ರಮಂದಿರಗಳು ಶೇ 50ರಷ್ಟು ಸೀಟು ಭರ್ತಿಯೊಂದಿಗೆ ಕಾರ್ಯಾಚರಿಸಲಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.