ನವದೆಹಲಿ: ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಿತು.
ಇದೇ ವೇಳೆ, ನಿಮಿಷಾ ಅವರ ಶಿಕ್ಷೆ ಮುಂದೂಡಿಕೆಯಾದ ಬಗ್ಗೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ, ನಿಮಿಷಾ ಅವರನ್ನು ಕರೆತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
‘ನಿಮಿಷಾ ಪ್ರಿಯಾ ಅವರು ಸುರಕ್ಷಿತವಾಗಿ ವಾಪಸ್ಸಾಗಬೇಕು ಎಂದು ಸರ್ಕಾರ ಬಯಸುತ್ತದೆ, ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನೂ ಸರ್ಕಾರ ನಡೆಸುತ್ತಿದೆ’ ಎಂದು ತಿಳಿಸಿದರು.
ಅರ್ಜಿದಾರರ ಪರ ಹಾಜರಾದ ವಕೀಲರು, ‘ಮೊದಲು ಅವರಿಗೆ ಕ್ಷಮಾದಾನ ಸಿಗಬೇಕು, ನಂತರ ‘ಬ್ಲಡ್ ಮನಿ’ ವಿಷಯ ಬರುತ್ತದೆ’ ಎಂದು ಹೇಳಿದರು.
ಈ ಕುರಿತಾದ ವಿಚಾರಣೆಯನ್ನು ಆ.14ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಈ ಹಿಂದೆ ಜುಲೈ 16ಕ್ಕೆ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು. ಶಿಕ್ಷೆ ಮುಂದೂಡಿಕೆಯಾದ ಕಾರಣ ಸದ್ಯ ಅವರು ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ.
2017ರಲ್ಲಿ ಯೆಮೆನ್‌ನ ನಾಗರಿಕ ತಲಾಲ್ ಅಬ್ದೋ ಮಹ್ದಿ ಹತ್ಯೆ ಮಾಡಿದ ಆರೋಪದ ಮೇಲೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನಿವಾಸಿ ನಿಮಿಷಾ ಪ್ರಿಯಾ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.