ADVERTISEMENT

ಮರಣಾ ನಂತರ ಏನಾಗುತ್ತದೆ?: ಆತ್ಮಹತ್ಯೆಗೂ ಮುನ್ನ ಗೂಗಲ್ ಮಾಡಿದ್ದ ಬಾಲಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:33 IST
Last Updated 13 ಜನವರಿ 2025, 15:33 IST
<div class="paragraphs"><p>ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)</p></div>

ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)

   

ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ ಕಳೆದ ಶನಿವಾರ ಆತ್ಮಹತ್ಯೆಗೆ ಶರಣಾದ ಬಾಲಕನು, ‘ಸಾವಿನ ಬಳಿಕ ಜೀವನ ಹೇಗಿರುತ್ತದೆ, ಏನಾಗುತ್ತದೆ?’ ಎಂದೆಲ್ಲಾ ಗೂಗಲ್‌ ಹಾಗೂ ಯುಟ್ಯೂಬ್‌ನಲ್ಲಿ ಹುಡುಕಾಟ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತ, ಆತ್ಮಹತ್ಯೆಗೂ ಮುನ್ನ ‘ಗರುಡ ಪುರಾಣ’ದ ಬಗ್ಗೆಯೂ ಹುಡುಕಾಟ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿರುವ ಈ ಗ್ರಂಥವು, ಮಾನವನ ಅಂತ್ಯಕ್ರಿಯೆಗೆ ಸಂಬಂಧಿಸಿದ ಹಾಗೂ ಮರಣಾನಂತರದ ಜೀವನ ಕುರಿತಾದ ವಿಚಾರಗಳ ಬಗ್ಗೆ ತಿಳಿಸುತ್ತದೆ.

ADVERTISEMENT

ಬುದ್ಧಿಮಾತು ಹೇಳಿದ್ದಕ್ಕೆ ಆತ್ಮಹತ್ಯೆ?: ಓದಿನತ್ತ ಹೆಚ್ಚು ಗಮನ ಕೊಡದ ಆ ಬಾಲಕನಿಗೆ, ಅವನ ಹಿರಿಯ ಸಹೋದರ ಹಾಗೂ ತಾಯಿಯು ಬುದ್ಧಿಮಾತು ಹೇಳಿದ್ದರು. ಇದರಿಂದ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ. ಅಲ್ಲದೆ, ಆತ ಒಂದು ದ್ವಿಚಕ್ರವಾಹನ ಹೊಂದಿದ್ದು, ಅದರ ಮೇಲೆ ವಿಪರೀತ ವ್ಯಾಮೋಹ ಬೆಳೆಸಿಕೊಂಡಿದ್ದ. ಹೀಗಾಗಿ, ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ ಎಂದು ಭಾವಿಸಿದ್ದ ಆತನ ಪೋಷಕರು, ಆ ದ್ವಿಚಕ್ರವಾಹನವನ್ನು ಈಚೆಗಷ್ಟೇ ಮಾರಾಟ ಮಾಡಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ. 

ಮೀರತ್‌ನ ಅಪೆಕ್ಸ್‌ ಕಾಲೊನಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಜನವರಿ 11ರಂದು ಸಾವಿಗೀಡಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.