ಪಾಲಕ್ಕಾಡ್, ಕೇರಳ: ‘ಉತ್ತರ ಕೇರಳದಲ್ಲಿ ನಿಫಾ ವೈರಾಣು ದಾಳಿಗೆ ತುತ್ತಾದ ರೋಗಿಯ ಸ್ಥಿತಿಯು ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆಗಳನ್ನು ನೀಡಲು ಕ್ರಮ ವಹಿಸಲಾಗುವುದು’ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಥಛನ್‌ಟ್ಟುಕರಾದ 38 ವರ್ಷದ ಮಹಿಳೆಗೆ ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಲಪ್ಪುರಂ ಮೂಲದ ರೋಗಿಯೊಬ್ಬರು ಕಳೆದ ವಾರ ನಿಫಾ ದಾಳಿಯಿಂದ ಮೃತಪಟ್ಟಿದ್ದರು.
‘ಪಾಲಕ್ಕಾಡ್ ವೈದ್ಯಕೀಯ ಕಾಲೇಜಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಜಾರ್ಜ್ ಅವರು, ‘ರೋಗ ನಿಯಂತ್ರಣಕ್ಕೆ ಪ್ರತಿಕಾಯಗಳಂತೆ ಕಾರ್ಯನಿರ್ವಹಿಸುವ ಜೀವಕೋಶದ ಚಿಕಿತ್ಸೆಯನ್ನು ರೋಗಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ರೋಗಿಯ ಪರಿಸ್ಥಿತಿ ಗಂಭೀರವಾಗಿದೆ. ಲಭ್ಯವಿರುವ ಎಲ್ಲ ಚಿಕಿತ್ಸೆಗಳನ್ನು ಮುಂದುವರಿಸಲಾಗಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ರೋಗಿಯ ಸಂಪರ್ಕಕ್ಕೆ ಬಂದ 173 ಮಂದಿಯ ಪೈಕಿ 52 ಮಂದಿಯನ್ನು ಹೆಚ್ಚಿನ ಅಪಾಯದಲ್ಲಿರುವವರು, 48 ಮಂದಿಯನ್ನು ಕಡಿಮೆ ಅಪಾಯ ಇರುವ ಸೋಂಕಿತರು ಎಂದು ಪ್ರತ್ಯೇಕಿಸಲಾಗಿದೆ. ಎಲ್ಲರನ್ನೂ ಮಲಪ್ಪುರಂನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ರೋಗಿ ಮನೆಯ ಮೂರು ಕಿ.ಲೋ ಮೀಟರ್ ಸುತ್ತಲೂ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಟ್ಟುನಿಟ್ಟಾಗಿ ಮೇಲುಸ್ತುವಾರಿ ವಹಿಸಲಾಗಿದೆ’ ಎಂದು ವಿವರಿಸಿದರು.
‘ನಿಫಾ ವೈರಾಣು ಕುರಿತು ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಈ ವೇಳೆ ವೀಣಾ ಜಾರ್ಜ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.