ADVERTISEMENT

ನಿರ್ಮಲಾ ಸೀತಾರಾಮನ್‌ ಸಂಸತ್‌ನಲ್ಲಿ ಸುಳ್ಳು ಹೇಳುತ್ತಿದ್ದಾರೆ: ರಾಹುಲ್‌

ಏಜೆನ್ಸೀಸ್
Published 7 ಜನವರಿ 2019, 10:44 IST
Last Updated 7 ಜನವರಿ 2019, 10:44 IST
   

ನವದೆಹಲಿ:‘ರಫೇಲ್‌ ಒಪ್ಪಂದ ಕುರಿತು ಪ್ರಧಾನಿ ಹೇಳಿರುವ ಸುಳ್ಳನ್ನು ಮರೆಮಾಚಲು ರಕ್ಷಣಾ ಸಚಿವರು ಸಂಸತ್ತಿಗೆ ಮತ್ತೊಂದು ಸುಳ್ಳು ಹೇಳಿದ್ದಾರೆ‘ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಇಂದು ಪುನರುಚ್ಚರಿಸಿದ್ದಾರೆ.

’ರಫೇಲ್‌ ವಿಷಯವಾಗಿ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ನಿಮ್ಮ(ಪ್ರಧಾನಿ, ರಕ್ಷಣಾ ಮಂತ್ರಿ) ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿ ಹಾಗೂ ರಕ್ಷಣಾ ಸಚಿವರು ದಯವಿಟ್ಟು ಹೌದು ಅಥವಾ ಇಲ್ಲಾ ಎಂಬ ಉತ್ತರ ನೀಡಬೇಕೆಂದು ನಾನು ಮತ್ತೊಮ್ಮೆ ಕೇಳುತ್ತೇನೆ‘ ಎಂದು ರಾಹುಲ್‌ ಹೇಳಿದ್ದಾರೆ.

ರಫೇಲ್‌ ಒಪ್ಪಂದ ಕುರಿತು ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಚ್‌ಎಎಲ್‌ಗೆ ₹1 ಲಕ್ಷ ಮೊತ್ತದ ಕೆಲಸ ನೀಡಲಾಗಿದೆ ಎಂದು ಈ ಮೊದಲು ಹೇಳಿದ್ದರು. ಆದರೆ, ಇಂದು ₹26,570.80 ಕೋಟಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಮೂಲಕ ಅವರು ಸಂಸತ್‌ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ADVERTISEMENT

ಎಚ್‌ಎಎಲ್ ವೇತನ ಪಾವತಿಸಲು ಸಾಕಷ್ಟು ಹಣವನ್ನು ಹೊಂದಿಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ ಎಂದು ರಾಹುಲ್‌ ಗಾಂಧಿ ಸೋಮವಾರ ಮತ್ತೊಂದು ಟ್ವಿಟ್‌ ಮಾಡಿದ್ದಾರೆ.

ವೇತನವಿಲ್ಲದೆ ಎಚ್‌ಎಎಲ್‌ನ ಅತ್ಯುತ್ತಮ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಒತ್ತಾಯ ಪುರ್ವಕವಾಗಿ ಬೇರೆಡೆ ಮುಖಮಾಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಈ ಕುರಿತು ಭಾನುವಾರ ರಾಹುಲ್‌ ಗಾಂಧಿ, ರಫೇಲ್‌ ಒಪ್ಪಂದ ಕುರಿತು ಪ್ರಧಾನಿ ಹೇಳಿದ ಸುಳ್ಳುಗಳನ್ನು ಮುಚ್ಚಿಹಾಕಲು ರಕ್ಷಣಾ ಸಚಿವರು ಸಂಸತ್‌ಗೆ ಸುಳ್ಳು ಹೇಳುತ್ತಿದ್ದಾರೆ. ಎಚ್‌ಎಎಲ್‌ಗೆ ಕೆಲಸ ನೀಡಿರುವ ಬಗ್ಗೆ ಸಂಸತ್ತಿನಲ್ಲಿ ದಾಖಲೆ ಮಂಡಿಸಬೇಕು, ಇಲ್ಲದಿದ್ದರೆ ರಾಜೀನಾಮೆ ನೀಡಬೇಕು’ ಎಂದು ಟ್ವೀಟ್‌ ಮೂಲಕ ರಕ್ಷಣಾ ಸಚಿವರನ್ನು ಆಗ್ರಹಿಸಿದ್ದರು.

ರಕ್ಷಣಾ ಒಪ್ಪಂದಗಳ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಎ.ಬಿ.ಸಿ.ಡಿ .. ಕೂಡ ಗೊತ್ತಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದರು.

ಎಚ್‌ಎಎಲ್‌ ಗುತ್ತಿಗೆ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ರಾಹುಲ್‌ ಗಾಂಧಿ, ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.