ನಿಶಿಕಾಂತ್ ದುಬೆ
ನವದೆಹಲಿ: 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧವನ್ನು ಇಂದಿರಾ ಗಾಂಧಿ ನಿರ್ವಹಿಸಿದ ರೀತಿ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ, ರಾಹುಲ್ ಗಾಂಧಿ ಅವರು ‘ತಿರುಚಲಾದ ಮತ್ತು ತಪ್ಪಾದ ಸಂಗತಿ’ಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಟೀಕಿಸಿದರು.
‘ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿರುವ ರಾಹುಲ್ ಗಾಂಧಿ ಪದೇಪದೇ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಅವರ ಕಿವಿಹಿಂಡಿ’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ದುಬೆ ಒತ್ತಾಯಿಸಿದ್ದಾರೆ.
‘ಈ ವಿಚಾರವಾಗಿ ದುಬೆ ಅವರು ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಪ್ರಶ್ನಾರ್ಹ ಹೇಳಿಕೆಗಳನ್ನು ನೀಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಕಾರಣ ಕೇಳಿ ನೋಟಿಸ್ ಮಾಡಬೇಕು. ಅಲ್ಲದೇ, ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಬೇಕು ಎಂಬುದಾಗಿ ದುಬೆ ಕೋರಿದ್ದಾರೆ’ ಎಂದು ಮೂಲಗಳು ಹೇಳಿವೆ.
ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ‘ಪಾಕಿಸ್ತಾನ ವಿರುದ್ಧ ಯುದ್ಧದ ವೇಳೆ ಇಂದಿರಾ ಗಾಂಧಿ ತೋರಿದ್ದ ಧೈರ್ಯದ ಅರ್ಧದಷ್ಟು ಮೋದಿ ಅವರಿಗೆ ಇದ್ದಿದ್ದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ’ ಎಂದು ರಾಹುಲ್ ಗಾಂಧಿ ಹೇಳಿದ್ದರು.
‘ಪಾಕಿಸ್ತಾನ ವಿರುದ್ಧ ಯುದ್ಧ ನಡೆದಿದ್ದ ವೇಳೆ, ಕಾರ್ಯಾಚರಣೆಗೆ ಸಂಬಂಧಿಸಿ ಇಂದಿರಾ ಗಾಂಧಿ ಅವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಮೋದಿ ಸರ್ಕಾರ ಸಶಸ್ತ್ರ ಪಡೆಗಳ ಯೋಧರ ಕೈಗಳನ್ನು ಕಟ್ಟಿಹಾಕಿತ್ತು’ ಎಂದೂ ರಾಹುಲ್ ಗಾಂಧಿ ಹೇಳಿದ್ದರು.
ಅಮೆರಿಕದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು 1971ರ ಡಿಸೆಂಬರ್ 5ರಂದು ಬರೆದಿದ್ದ ಪತ್ರವನ್ನು ಉಲ್ಲೇಖಿಸುವ ಮೂಲಕ ದುಬೆ ಅವರು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದರು.
ಭಾರತ–ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿ ಐತಿಹಾಸಿಕ ಸಂಗತಿಗಳನ್ನು ತಿರುಚುವ ಮೂಲಕ ರಾಹುಲ್ ಗಾಂಧಿ ಅವರು ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ.ನಿಶಿಕಾಂತ್ ದುಬೆ, ಬಿಜೆಪಿ ಸಂಸದ
‘ನಿಮ್ಮ ಪ್ರಭಾವ ಬಳಸಿ, ಪಾಕಿಸ್ತಾನದೊಂದಿಗಿನ ಯುದ್ಧ ನಿಲ್ಲಿಸಿ ಎಂದು ಇಂದಿರಾ ಗಾಂಧಿ ಅಕ್ಷರಶಃ ನನ್ನಲ್ಲಿ ಬೇಡಿಕೊಂಡಿದ್ದರು’ ಎಂದು ನಿಕ್ಸನ್ ಪತ್ರದಲ್ಲಿ ಬರೆದಿದ್ದರು ಎಂಬ ಅಂಶವನ್ನು ದುಬೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬಿರ್ಲಾ ಅವರಿಗೆ ಸಲ್ಲಿಸಿರುವ ಮನವಿ ಪತ್ರದೊಂದಿಗೆ ಅವರು ಈ ಪತ್ರದ ಪ್ರತಿಯನ್ನು ಲಗತ್ತಿಸಿದ್ದಾರೆ.
‘ಈ ರೀತಿ ತಿರುಚಿದ ಸಂಗತಿಗಳಣ್ನು ಹೇಳುವುದು ಸ್ಪೀಕರ್ ಅವರ ನಿರ್ದೇಶನಗಳ ಉಲ್ಲಂಘನೆ ಮಾಡಿದಂತೆ’ ಎಂದೂ ದುಬೆ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.