ADVERTISEMENT

ರಸ್ತೆ ಅಪಘಾತದ ಗಾಯಾಳುಗಳಿಗೆ ‘ನಗದು ರಹಿತ ಚಿಕಿತ್ಸೆ’ ಯೋಜನೆ ಘೋಷಿಸಿದ ಗಡ್ಕರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2025, 12:54 IST
Last Updated 8 ಜನವರಿ 2025, 12:54 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ‘ನಗದು ರಹಿತ ಚಿಕಿತ್ಸೆ’ಯೋಜನೆಯನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಇದರಡಿ, ಅಪಘಾತದಲ್ಲಿ ಗಾಯಗೊಂಡವರಿಗೆ 7 ದಿನಗಳ ಕಾಲ ₹1.5 ಲಕ್ಷದವರೆಗೆ ನಗದು ರಹಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಪಘಾತ ಸಂಭವಿಸಿದ 24 ಗಂಟೆಗಳೊಳಗಾಗಿ ‍ಪೊಲೀಸರು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಬೇಕು ಎಂದಿದ್ದಾರೆ.

ಅಲ್ಲದೆ, ಹಿಟ್ ಅಂಡ್ ರನ್‌ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ ₹2 ಲಕ್ಷ ಪರಿಹಾರ ನೀಡುವುದಾಗಿ ಗಡ್ಕರಿ ಘೋಷಿಸಿದ್ದಾರೆ.

ADVERTISEMENT

‘ಅಪಘಾತ ಸಂಭವಿಸಿದ 24 ಗಂಟೆಗಳೊಳಗೆ ಗಾಯಾಳುಗಳ ಚಿಕಿತ್ಸೆಗೆ ನಾವು ನಗದು ರಹಿತ ಚಿಕಿತ್ಸೆಯ ಹೊಸ ಯೋಜನೆ ಆರಂಭಿಸಿದ್ದೇವೆ. ಪೊಲೀಸರಿಂದ ಮಾಹಿತಿ ಬಂದ ಕೂಡಲೇ ₹1.6 ಲಕ್ಷದವರೆಗೆ ನಾವು 7 ದಿನಗಳ ಚಿಕಿತ್ಸೆಗೆ ಹಣ ಒದಗಿಸಲಿದ್ದೇವೆ. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ ತಲಾ ₹2 ಲಕ್ಷ ಪರಿಹಾರ ನೀಡುತ್ತೇವೆ’ಎಂದು ಗಡ್ಕರಿ ಹೇಳಿದ್ದಾರೆ.

‘ರಸ್ತೆ ಸುರಕ್ಷತೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. 2024ರಲ್ಲಿ 1.84 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶ ಉಲ್ಲೇಖಿಸಿದ ಅವರು, 30,000 ಮಂದಿ ಹೆಲ್ಮೆಟ್ ಧರಿಸದೇ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾಗಿವವರಲ್ಲಿ ಶೇ 66ರಷ್ಟು ಮಂದಿ 18ರಿಂದ 34 ವರ್ಷ ವಯಸ್ಸಿನವರು’ಎಂದರು.

ಶಾಲೆ ಮತ್ತು ಕಾಲೇಜುಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ 10,000 ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಡ್ಕರಿ ಹೇಳಿದರು. ಶಾಲಾ ಬಸ್ ಮತ್ತು ಆಟೋಗಳಿಗೂ ನಿಯಮ ರೂಪಿಸಲಾಗಿದೆ ಎಂದು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರ ಜೊತೆಗಿನ ಸಭೆ ಬಳಿಕ ಗಡ್ಕರಿ ಈ ಘೋಷಣೆಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.