
ನಿತಿನ್ ನವೀನ್ ಮತ್ತು ರಾಹುಲ್ ಗಾಂಧಿ
ಪಟ್ನಾ: ‘ದೇಶದ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬುಧವಾರ ಆರೋಪಿಸಿದರು.
ಕಳೆದ ವಾರ ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಯಲ್ಲಿ ಅಮೆರಿಕ–ಭಾರತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಯುವ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ನಿತಿನ್, ‘ನೆಹರು–ಇಂದಿರಾ ಕುಟುಂಬದ ‘ರಾಜಿ ಕಾರ್ಯ’ವನ್ನು ಬಹಿರಂಗಪಡಿಸುತ್ತೇನೆ’ ಎಂದು ಹೇಳಿದರು.
‘ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೇ ರಾಹುಲ್ ಅವರು 247 ಬಾರಿ ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಇದೆಲ್ಲವೂ ರಾಹುಲ್ ಗಾಂಧಿಯವರ ‘ರಾಜಿ ಕಾರ್ಯದ’ ಭಾಗವಾಗಿದೆ’ ಎಂದು ದೂರಿದರು.
‘ರಾಹುಲ್ ಅವರ ಅಜ್ಜ ಜವಾಹರಲಾಲ್ ನೆಹರೂ ಅವರಿಂದ ಪ್ರಾರಂಭವಾಗಿರುವ ಈ ‘ರಾಜಿ ಕಾರ್ಯ’ ತಲೆಮಾರುಗಳವರೆಗೆ ಮುಂದುವರಿದಿದೆ’ ಎಂದು ಪ್ರತಿಪಾದಿಸಿದರು.
‘ರಾಹುಲ್ ಅವರು ವಿದೇಶದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ಪರವಿರುವ ‘ಶಕ್ತಿ’ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ ಬಿಲಿಯನೇರ್ ಜಾರ್ಜ್ ಸೊರೊಸ್, ಯುಎಸ್ ಕಾಂಗ್ರೆಸ್ ಸದಸ್ಯ ಇಲ್ಹಾನ್ ಒಮರ್ ಮತ್ತು ಕೀನ್ಯಾದ ಫೈನಾನ್ಷಿಯರ್ ಶಕೀರ್ ಮೆರಾಲಿ ಕೂಡ ಸೇರಿದ್ದಾರೆ’ ಎಂದು ಹೇಳಿದರು.
‘2004 ರಿಂದ 2014 ರವರೆಗೆ ರಾಹುಲ್ ತಾಯಿ ಸೋನಿಯಾ ಗಾಂಧಿ ಅವರು 'ಸೂಪರ್ ಪ್ರಧಾನಿ'ಯಾಗಿದ್ದರು. ಅಂತಹ ಉನ್ನತ ಸಾಂವಿಧಾನಿಕ ಹುದ್ದೆಯ ಅಧಿಕಾರವನ್ನೂ ಅವರು ‘ರಾಜಿ ಕಾರ್ಯ’ಕ್ಕಾಗಿ ಬಳಸಿಕೊಂಡಿದ್ದರು’ ಎಂದು ಹೇಳಿದರು.
‘ರಾಹುಲ್ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ‘ತಮ್ಮ ವೈಯಕ್ತಿಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಬೊಫೋರ್ಸ್ ಒಪ್ಪಂದವನ್ನು ಬಳಸಿಕೊಂಡಿದ್ದರು’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.