ADVERTISEMENT

ಮಗನಿಗಾಗಿ 7-8 ಮಕ್ಕಳ ಹಡೆದವರು ಎಂದ ನಿತೀಶ್: ನಿತೀಶ್‌ ಗುರಿ ಮೋದಿ ಎಂದ ತೇಜಸ್ವಿ

ಪಿಟಿಐ
Published 27 ಅಕ್ಟೋಬರ್ 2020, 11:26 IST
Last Updated 27 ಅಕ್ಟೋಬರ್ 2020, 11:26 IST
ಪಟ್ನಾದ ಎಲ್‌ಜೆಪಿ ಕಚೇರಿಯಲ್ಲಿ ನಡೆದ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಶ್ರಾದ್ಧಾ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌
ಪಟ್ನಾದ ಎಲ್‌ಜೆಪಿ ಕಚೇರಿಯಲ್ಲಿ ನಡೆದ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಶ್ರಾದ್ಧಾ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌    

ಪಟ್ನಾ: ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಹೆಸರು ಹೇಳದೇ ಅವರ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ಒಬ್ಬ ಮಗನನ್ನು ಪಡೆಯಲು 8-9 ಮಕ್ಕಳನ್ನು ಹಡೆದವರಿಂದ ಯಾವುದೇ ಅಭಿವೃದ್ಧಿಯನ್ನು ನಿರೀಕ್ಷಿಸಲಾಗುವುದಿಲ್ಲ,’ ಎಂದು ವ್ಯಂಗ್ಯವಾಡಿದ್ದಾರೆ.

ನಿತೀಶ್‌ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಲಾಲು ಪುತ್ರ ತೇಜಸ್ವಿ ಅವರಿಂದ ತಿರುಗೇಟನ್ನೂ ಪಡೆದಿದ್ದಾರೆ. ‘ಜೆಡಿಯು ನಾಯಕ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದಾರೆ,’ ಎಂದು ತೇಜಸ್ವಿ ಹೇಳಿದ್ದಾರೆ.

ವೈಶಾಲಿ ಜಿಲ್ಲೆಯ ಮಹ್ನಾರ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ನಿತೀಶ್‌,

ADVERTISEMENT

‘ಯಾರಾದರೂ ಈ ಮಟ್ಟದ ಕಾಳಜಿ ಹೊಂದಿರುತ್ತಾರೆಯೇ? ಅವರು 8-9 ಮಕ್ಕಳನ್ನು ಹಡೆದಿದ್ದಾರೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ನಂಬಿಕೆಯಿಲ್ಲ. ಒಬ್ಬ ಮಗನಿಗೂ ಮೊದಲು ಅವರಿಗೆ 7-8 ಹೆಣ್ಣುಮಕ್ಕಳಿದ್ದರು. ಅವರು ಯಾವ ರೀತಿಯ ಬಿಹಾರವನ್ನು ಕಟ್ಟಲು ಬಯಸುತ್ತಾರೆ? ಇದು ಅವರ ಆದರ್ಶವಾಗಿದ್ದರೆ, ಬಿಹಾರದ ಕತೆ ಏನಾಗುತ್ತದೆ?’ ಎಂದು ನಿತೀಶ್‌ ಅವರು 9 ಮಕ್ಕಳನ್ನು ಹೊಂದಿರುವ ಲಾಲು ಪ್ರಸಾದ್‌ ಯಾದವ್‌ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಿತೀಶ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ಜೆಡಿ ನಾಯಕ ತೇಜಶ್ವಿ ಯಾದವ್, ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ‘5-6 ಸಹೋದರರು ಮತ್ತು ಸಹೋದರಿಯರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ನಿತೀಶ್‌ ಅವರು ಇಂತಹ ಮಾತುಗಳನ್ನು ಆಡಿದ್ದಾರೆ,’ ಎಂದಿದ್ದಾರೆ.

‘ನಿತೀಶ್‌ ಅವರ ನಿಂದನೆಯನ್ನು ನಾನು ಆಶೀರ್ವಾದವೆಂದು ಭಾವಿಸುತ್ತೇನೆ. ಇದು ನನ್ನ ತಾಯಿ ಮತ್ತು ಇತರ ಮಹಿಳೆಯರ ಅಪಮಾನವೂ ಹೌದು. ನಿತೀಶ್‌ ದೈಹಿಕ ಹಾಗೂ ಮಾನಸಿಕವಾಗಿ ದಣಿದಿದ್ದಾರೆ. ಹಾಗಾಗಿಯೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ,’ ಎಂದು ವ್ಯಂಗ್ಯವಾಡಿದ್ದಾರೆ.

ಘಟಬಂಧನ ತೊರೆದಿದ್ದಕ್ಕೆ ಕಾರಣ ನೀಡಿದ ನಿತೀಶ್‌

2017ರಲ್ಲಿ ಘಟಬಂಧನ ತೊರೆದಿದ್ದು ಯಾಕೆ ಎಂಬುದನ್ನು ನಿತೀಶ್‌ ಮಹ್ನಾರ್‌ನ ಚುನಾವಣಾ ಸಭೆಯಲ್ಲಿ ಬಹಿರಂಗಗೊಳಿಸಿದರು. ‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿ ಬರುವಂತೆ ನಾನು ಅವರಿಗೆ (ತೇಜಶ್ವಿ) ಹೇಳಿದೆ. ಅವರಿಗೆ ಅದು ಸಾಧ್ಯವಾಗಲಿಲ್ಲ. ಪೊಲೀಸರ ಮೇಲೆ ಪ್ರಭಾವ ಬೀರುವ ತಮ್ಮ ಹಳೆಯ ಕೃತ್ಯಗಳನ್ನು ಅವರು ಮತ್ತೆ ಆರಂಭಿಸಿದ್ದರು ಎಂಬುದನ್ನು ನಾನು ಅರಿತೆ. ಅವರೊಂದಿಗೆ ಕೆಲಸ ಮಾಡುವುದು ಕಷ್ಟ ಎಂದು ನಾನು ಭಾವಿಸಿದೆ. ಅವರಿಂದ ಮತ್ತು ಮೈತ್ರಿಯಿಂದ ಹೊರನಡೆದೆ,’ ಎಂದು ನಿತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.