ನಿತೀಶ್ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದೀಪಕ್ ಪ್ರಕಾಶ್
ಚಿತ್ರ ಕೃಪೆ: @DeshiBalakHuBro
ಪಟ್ನಾ: ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಅವರು ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ಸ್ವೀಕರಿಸಿದ್ದಾರೆ. ಜೊತೆಗೆ ಎನ್‌ಡಿಎ ಮೈತ್ರಿಕೂಟದ 26 ಜನ ಸದಸ್ಯರುಗಳು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದರಲ್ಲಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದು ದೀಪಕ್ ಪ್ರಕಾಶ್.
ನಿತೀಶ್ ಕುಮಾರ್ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ದೀಪಕ್ ಪ್ರಕಾಶ್ ಇದುವರೆಗೂ ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರೂ ಅಲ್ಲ. ಆದರೂ, ಅವರಿಗೆ ಮಂತ್ರಿಗಿರಿ ಸಿಕ್ಕಿದ್ದು ಹೇಗೆ ಎಂಬ ಚರ್ಚೆಗಳು ಸಾಮಾನ್ಯವಾಗಿ ನಡೆಯುತ್ತಿವೆ.
ಅಂದಹಾಗೆ, ದೀಪಕ್ ಪ್ರಕಾಶ್ ಸಾಮಾನ್ಯ ವ್ಯಕ್ತಿಯಲ್ಲ, ಪ್ರತಿಷ್ಠಿತ ರಾಜಕೀಯ ಹಿನ್ನೆಲೆ ಇರುವ, ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷದ ಮಾಜಿ ಕೇಂದ್ರ ಸಚಿವ, ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿರುವ ಮತ್ತು ಹಾಲಿ ರಾಜ್ಯಸಭಾ ಸಂಸದರಾಗಿರುವ ಉಪೇಂದ್ರ ಕುಶ್ವಾಹ ಮತ್ತು ಸಸರಾಮ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಸ್ನೇಹಲತಾ ಅವರ ಮಗ.
ನಿತೀಶ್ ಕುಮಾರ್ ಸರ್ಕಾರದಲ್ಲಿ ಆರ್‌ಎಲ್‌ಎಮ್ ಪಕ್ಷದ ಕೋಟಾದಿಂದ ಸ್ನೇಹಲತಾ ಕುಶ್ವಾಹಾ ಅವರೇ ಸಚಿವರಾಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಉಪೇಂದ್ರ ಕುಶ್ವಾಹಾ ತಮ್ಮ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಪುತ್ರನ ಹೆಸರನ್ನು ಮುಂದೆ ತಂದು ಸಚಿವರನ್ನಾಗಿ ನೇಮಿಸಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.