(ಚಿತ್ರ ಕೃಪೆ–X/@PTI_News
ಮುಜಫ್ಫರ್‌ಪುರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಎನ್‌ಡಿಎಯ ಮಹಿಳಾ ಅಭ್ಯರ್ಥಿಗೆ ಹಾರ ಹಾಕಿದ್ದು, ಅವರ ಮಾನಸಿಕ ಆರೋಗ್ಯದ ಬಗ್ಗೆ ಹೊಸ ಊಹಾಪೋಹ ಏಳುವಂತೆ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಮುಜಫ್ಫರ್‌ಪುರ ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಘಟನೆ ನಡೆದಿದೆ. ನಿತೀಶ್ ಅವರು ವೇದಿಕೆಯಲ್ಲಿದ್ದ ಔರಾಯಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮಾ ನಿಶಾದ್ ಅವರಿಗೆ ಹಾರ ಹಾಕಲು ಮುಂದಾದರು. ಈ ವೇಳೆ ಅಲ್ಲೇ ಇದ್ದ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ನಿತೀಶ್ ಅವರ ಕೈಹಿಡಿದು ಹಾರ ಹಾಕುವುದನ್ನು ತಡೆಯಲು ಪ್ರಯತ್ನಿಸಿದರು.
ಆದರೆ ಝಾ ಅವರ ಕೈಯನ್ನು ದೂರಕ್ಕೆ ತಳ್ಳಿದ ನಿತೀಶ್ ಅವರು ರಮಾ ಅವರಿಗೆ ಹಾರ ಹಾಕಿದರು. ಸ್ಥಳೀಯ ಹಿಂದೂ ಸಂಪ್ರದಾಯದ ಪ್ರಕಾರ ಒಬ್ಬ ಮಹಿಳೆ ಗಂಡನನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಹಾರ ಹಾಕಿಸುವಂತಿಲ್ಲ. ನಿತೀಶ್ ಅವರು ಹಾರ ಹಾಕಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಈ ವಿಡಿಯೊ ಹಂಚಿಕೊಂಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ‘ಅವರು ಉತ್ತಮ ಮಾನಸಿಕ ಆರೋಗ್ಯ ಹೊಂದಿದ್ದರೆ, ಈ ರೀತಿಯ ನಡವಳಿಕೆಯನ್ನು ಏಕೆ ತೋರುತ್ತಿದ್ದರು’ ಎಂದು ಪ್ರಶ್ನಿಸಿದ್ದಾರೆ.
ನಿತೀಶ್ ಅವರು ಇದೇ ರ್‍ಯಾಲಿಯಲ್ಲಿ ಪಕ್ಷದ ಸ್ಥಳೀಯ ಅಭ್ಯರ್ಥಿ ಅಜಯ್ ಕುಶ್ವಾಹ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರಲ್ಲದೆ, ರಮಾ ಅವರ ಹೆಸರು ಹೇಳುವಾಗ ‘ಶ್ರೀ ರಮಾ ನಿಶಾದ್’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.