ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ಪಿಟಿಐ ಚಿತ್ರ
ಪೂರ್ಣಿಯಾ: ‘ಇನ್ಮುಂದೆ ಎನ್‌ಡಿಎ ತೊರೆಯಲ್ಲ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ಇಲ್ಲಿ ಭರವಸೆ ನೀಡಿದರು.
ಬಿಹಾರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವ ಒಂದೆರಡು ವಾರಗಳಿಗೂ ಮುನ್ನ ಕೇಂದ್ರ ಸರ್ಕಾರದ ₹36 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ಒಂದೆರಡು ಬಾರಿ ಮೈತ್ರಿಯನ್ನು ಬದಲಿಸಿ ತಪ್ಪು ಮಾಡಿರುವೆ. ಇನ್ಮುಂದೆ ಎಲ್ಲಿಗೂ ಹೋಗಲ್ಲ’ ಎಂದು ಮೋದಿ ಅವರತ್ತ ಕೈಮುಗಿದು ಹೇಳಿದರು.
‘ಎನ್‌ಡಿಎ ಮೈತ್ರಿಕೂಟದಿಂದ ಹೊರಹೋಗಿ, ಆರ್‌ಜೆಡಿ– ಕಾಂಗ್ರೆಸ್‌ನ ಮಹಾಘಟಬಂಧನ್ ಜೊತೆ ಸರ್ಕಾರ ರಚಿಸಿದಾಗಲೆಲ್ಲಾ ಅವರು ಕಿಡಿಗೇಡಿತನದ ಕೆಲಸದಲ್ಲಿ ತಲ್ಲೀನರಾಗುತ್ತಿದ್ದರು. ನಾನು ಆ ಜನರೊಂದಿಗೆ ಎಂದಿಗೂ ಆರಾಮದಾಯಕವಾಗಿರಲು ಸಾಧ್ಯವಿಲ್ಲ ಎಂಬುದು ನನಗೆ ಮನದಟ್ಟಾಗಿದೆ’ ಎಂದರು.
ರಾಜ್ಯಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿಯು, ಕೇಂದ್ರ ಬಜೆಟ್‌ನಲ್ಲಿ ನೀಡಿರುವ ಅನುದಾನವನ್ನು ಉಲ್ಲೇಖಿಸಿದರು. ಬಿಹಾರದ ರೈತರಿಗಾಗಿ ಸ್ಥಾಪಿಸಿದ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ದೇಶದ ವೇಗದ ಬೆಳವಣಿಗೆಗೆ ಬಿಹಾರದ ತ್ವರಿತ ಪ್ರಗತಿಯೂ ಅತ್ಯಗತ್ಯ. ಎನ್‌ಡಿಎಯ ಡಬಲ್ ಎಂಜಿನ್ ಸರ್ಕಾರ ಬಿಹಾರದ ಅಭಿವೃದ್ಧಿಯನ್ನು ಖಾತ್ರಿಪಡಿಸಿದೆನರೇಂದ್ರ ಮೋದಿ ಪ್ರಧಾನಿ
ಮಖಾನಾ ಹೆಸರನ್ನೇ ಕೇಳಿಲ್ಲ: ಮೋದಿ ವ್ಯಂಗ್ಯ
‘ಬಿಹಾರದ ರೈತರಿಗಾಗಿ ನಾವು ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸುವ ತನಕವೂ ಕಾಂಗ್ರೆಸ್‌ನ ವರಿಷ್ಠರಿಗೆ ಈ ಪದವೇ ಗೊತ್ತಿರಲಿಲ್ಲ’ ಎಂದು ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೆ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಈಚೆಗಷ್ಟೇ ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ನಡೆಸಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಮಖಾನಾ ಬೆಳೆಯುವ ರೈತರೊಂದಿಗೆ ಸಂವಾದ ನಡೆಸಿದ್ದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ‘ಬಾಂಗ್ಲಾದೇಶ ಅಥವಾ ನೇಪಾಳದಿಂದ ಅಕ್ರಮವಾಗಿ ಇಲ್ಲಿಗೆ ಬಂದು ನೆಲಸಿರುವ ಎಲ್ಲರೂ ನಮ್ಮ ದೇಶವನ್ನು ತೊರೆಯಬೇಕು. ಅಕ್ರಮ ವಲಸಿಗರಿಗೆ ಇಲ್ಲಿ ವಾಸಿಸಲು ಮತ್ತು ಸ್ಥಳೀಯರ ಉದ್ಯೋಗಗಳನ್ನು ಕಸಿಯಲು ನಾವು ಅವಕಾಶ ನೀಡಲ್ಲ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.