
ಪಟ್ನಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಶಾಸಕರತ್ತ ಕೈಬೀಸಿದರು. ಬಿಜೆಪಿ ಶಾಸಕರಾದ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ ಅವರು ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ಪಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಸದಸ್ಯ ಪಕ್ಷಗಳ ಜಂಟಿ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಶಾಸಕಾಂಗ ಪಕ್ಷದ (ಎನ್‌ಡಿಎಎಲ್‌ಪಿ) ನಾಯಕನನ್ನಾಗಿ ಬುಧವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅದರ ಬೆನ್ನಲ್ಲೇ ಅವರು ಸಂಜೆ ರಾಜ್ಯಪಾಲ ಮೊಹಮ್ಮದ್ ಖಾನ್ ಅವರನ್ನು ಭೇಟಿಯಾಗಿ ನಿರ್ಗಮಿತ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಇದಕ್ಕೂ ಮುನ್ನ ನಿತೀಶ್ ಅವರನ್ನು ಜೆಡಿಯು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಮತ್ತೊಂದೆಡೆ, ಬಿಜೆಪಿ ನಾಯಕರ ಸಭೆಯಲ್ಲಿ ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ, ವಿಜಯ್ ಸಿನ್ಹಾ ಅವರನ್ನು ಉಪನಾಯಕನನ್ನಾಗಿ ಆರಿಸಲಾಯಿತು. ಈ ಇಬ್ಬರೂ ನಾಯಕರು ನಿರ್ಗಮಿತ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದರು.
ಡಿಸಿಎಂ ಸ್ಥಾನಕ್ಕೆ ಚಿರಾಗ್?:
ಹೊಸ ಸರ್ಕಾರದಲ್ಲಿ ಎರಡನೇ ಉಪ ಮುಖ್ಯಮಂತ್ರಿ ಸ್ಥಾನ ಬಿಜೆಪಿ ಅಥವಾ ಎಲ್‌ಜೆಪಿ (ಆರ್) ಪಾಲಾಗಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ. ಎಲ್‌ಜೆಪಿ (ಆರ್) ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಎರಡನೇ ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಗುರುವಾರ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೃಹ ಸಚಿವ ಅಮಿತ್ ಶಾ ಪಟ್ನಾಗೆ ಬಂದ ಬಳಿಕವಷ್ಟೇ ಈ ಕುತೂಹಲಕ್ಕೆ ತೆರೆಬೀಳಲಿದೆ ಎಂದು ಎನ್‌ಡಿಎ ಮೂಲಗಳು ತಿಳಿಸಿವೆ.
‘ಎರಡೂ ಆಯ್ಕೆಗಳು ಮುಕ್ತವಾಗಿವೆ. ಎರಡೂ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ನಮ್ಮ ಬಳಿಯೇ ಇಟ್ಟುಕೊಳ್ಳುವ ಅಥವಾ ಒಂದನ್ನು ಮಿತ್ರಪಕ್ಷದ ಕೇಂದ್ರ ಸಚಿವರಿಗೆ ನೀಡುವ ಆಯ್ಕೆಗಳು ನಮ್ಮ ಮುಂದಿವೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.
‘ಚಿರಾಗ್ ಪಾಸ್ವಾನ್ ಅವರು ತನ್ನ ಸಹೋದರಿಯ ಪತಿ, ಸಂಸದ ಅರುಣ್ ಭಾರತಿ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಿದ್ದರು. ಆದರೆ, ಅದಕ್ಕೆ ಮೈತ್ರಿಯಲ್ಲಿ ಸಮ್ಮತಿ ದೊರೆಯಲಿಲ್ಲ. ಹೀಗಾಗಿ ಎಲ್‌ಜೆಪಿ (ಆರ್) ಪಕ್ಷದಿಂದ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಚಿರಾಗ್ ಹೆಸರು ಬಲವಾಗಿ ಕೇಳಿಬರುತ್ತಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಸಚಿವರಾಗುವ ಸಂಭವನೀಯರು:
ನಿತೀಶ್ ಕುಮಾರ್ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಬಿಜೆಪಿಯ ಸಮ್ರಾಟ್ ಚೌಧರಿ, ವಿಜಯ್ ಸಿನ್ಹಾ, ನಿತೀಶ್ ಮಿಶ್ರಾ, ನಿತಿನ್ ನವೀನ್, ಜೆಡಿಯು ಪಕ್ಷದ ವಿಜಯ್ ಚೌಧರಿ, ಬಿಜೇಂದ್ರ ಯಾದವ್, ಅಶೋಕ್ ಚೌಧರಿ, ಶ್ರವಣ ಕುಮಾರ್, ಎಲ್‌ಎಜೆಪಿ (ಆರ್) ವತಿಯಿಂದ ರಾಜು ತಿವಾರಿ, ಎಚ್‌ಎಎಂ ಪಕ್ಷದ ಸಂತೋಷ್ ಕುಮಾರ್ ಸುಮನ್, ಆರ್‌ಎಲ್‌ಎಂ ಪಕ್ಷದ ಸ್ನೇಹಲತಾ ಕುಶ್ವಾಹ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.
ಸ್ಪೀಕರ್ ಹುದ್ದೆ ಮೇಲೆ ಕಣ್ಣು:
ಇದರ ನಡುವೆ, ವಿಧಾನಸಭೆಯ ಸ್ಪೀಕರ್ ಹುದ್ದೆ ತನ್ನ ಪಕ್ಷದ ನಾಯಕರಿಗೆ ದೊರೆಯಬೇಕು ಎಂದು ಜೆಡಿಯು ಬೇಡಿಕೆಯಿಟ್ಟಿತ್ತು. ಆದರೆ, ಇದನ್ನು ಬಿಜೆಪಿ ನಯವಾಗಿಯೇ ತಿರಸ್ಕರಿಸಿದೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನ ಜೆಡಿಯು ಪಾಲಾಗಿರುವುದರಿಂದ ಸ್ಪೀಕರ್ ಹುದ್ದೆ ಬಿಜೆಪಿ ಬಳಿ ಇರಬೇಕು ಎಂಬುದನ್ನು ಬಿಜೆಪಿ ನಾಯಕರು ಜೆಡಿಯು ಮುಖಂಡರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಪ್ರೇಮ್ ಕುಮಾರ್ ಅವರು ಹೊಸ ಸ್ಪೀಕರ್ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.