
ನಿತೀಶ್ ಕುಮಾರ್
ಪಟ್ನಾ: ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಸಕ್ತ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಜಯತಂದುಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಬಿಹಾರದ ರಾಜಕಾರಣದಲ್ಲಿ ವಿರೋಧಿಗಳು ಹಾಗೂ ಮಾಧ್ಯಮದವರು ಅವರನ್ನು ‘ಪಲ್ಟು ರಾಮ್’ ಎಂದೇ ಲೇವಡಿ ಮಾಡುತ್ತಾರೆ. ತಾನು, ಬೂದಿಯಿಂದ ಎದ್ದುಬರುವ ‘ಫೀನಿಕ್ಸ್’ ಪಕ್ಷಿಯಂತೆ ಎಂಬ ಸಂದೇಶವನ್ನು ನಿತೀಶ್ ರವಾನಿಸಿದ್ದಾರೆ.
ಅವರಿಗೆ ಮುಂದಿನ ವರ್ಷ ಮಾರ್ಚ್ 1ಕ್ಕೆ 75 ವರ್ಷ ತುಂಬಲಿದೆ. ಈ ಚುನಾವಣೆಯಲ್ಲಿ ಅವರ ಪಕ್ಷ ಜೆಡಿಯು ಅಧಿಕ ಸ್ಥಾನ ಗೆದ್ದಿರುವುದು ಗಮನಾರ್ಹ.
ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿರುವ ಹೆಗ್ಗಳಿಕೆ ಹೊಂದಿರುವ ಅವರನ್ನು ಬೆಂಬಲಿಗರು ‘ಸುಶಾಸನ ಬಾಬು’(ಉತ್ತಮ ಆಡಳಿತಗಾರ) ಎಂದು ಕರೆಯುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ಇಲ್ಲದ ಬಿಹಾರವನ್ನು ಅಭಿವೃದ್ಧಿಯ ಹಳಿಗೆ ತಂದ ಶ್ರೇಯಸ್ಸು ನಿತೀಶ್ ಕುಮಾರ್ ಅವರಿಗೆ ಸಲ್ಲುತ್ತದೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ನಿತೀಶ್ ಕುಮಾರ್ ಸವೆಸಿದ ರಾಜಕೀಯ ದಾರಿ ಸುಗಮವಾಗೇನೂ ಇಲ್ಲ. ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರೋಧಿ ಅಲೆ ಇತ್ತು. ತಮ್ಮ ಸಮಾಜವಾದಿ ಗೆಳೆಯರಾದ ಲಾಲು ಪ್ರಸಾದ್, ರಾಮವಿಲಾಸ್ ಪಾಸ್ವಾನ್ ಗೆದ್ದು ಬಂದರೂ, ನಿತೀಶ್ ಪರಾಭವಗೊಂಡಿದ್ದರು.
ಇಂದಿರಾ ಗಾಂಧಿ ಹತ್ಯೆ ನಂತರ 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ, ನಿತೀಶ್ ಅವರು ಮೊದಲ ಬಾರಿಗೆ ಗೆದ್ದು ಬಿಹಾರ ವಿಧಾನಸಭೆ ಪ್ರವೇಶಿಸಿದರು. ಅಂದಿನಿಂದಲೂ, ರಾಜಕೀಯವಾಗಿ ತುಳಿಯಲು ಅವರ ವಿರೋಧಿಗಳು ಯತ್ನಿಸಿದಾಗಲೆಲ್ಲಾ ನಿತೀಶ್ ಪುಟಿದೆದ್ದು ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.