ಪಟ್ನಾ: ಬಿಹಾರದ ಮಹಿಳೆಯೊಬ್ಬರ ಮತದಾರರ ಗುರುತಿನ ಚೀಟಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ.
ಮಾಧೇಪುರ ನಗರಪಾಲಿಕೆ ವ್ಯಾಪ್ತಿಯ ನಿವಾಸಿ ಅಭಿಲಾಷಾ ಕುಮಾರಿ ಈಚೆಗೆ ತಮ್ಮ ಪರಿಷ್ಕೃತ ಮತದಾರರ ಗುರುತಿನ ಚೀಟಿಯನ್ನು ಪಡೆದಿದ್ದು, ಹೆಸರು ಮತ್ತು ಇತರ ಮಾಹಿತಿಗಳು ಸರಿಯಾಗಿ ಮುದ್ರಿತವಾಗಿವೆ. ಆದರೆ ಭಾವಚಿತ್ರದ ಜಾಗದಲ್ಲಿ ಆಭಿಲಾಷಾ ಬದಲು, ಬಿಹಾರ ಮುಖ್ಯಮಂತ್ರಿಯ ಫೋಟೊ ಇದೆ.
‘ಗುರುತಿನ ಚೀಟಿಯಲ್ಲಿನ ವಿಳಾಸದ ತಿದ್ದುಪಡಿಗಾಗಿ ನಾನು ಅರ್ಜಿ ಸಲ್ಲಿಸಿದ್ದೆ. ಹೊಸ ಗುರುತಿನ ಚೀಟಿಯನ್ನು ಅಂಚೆ ಮೂಲ ಪಡೆದಿದ್ದು, ಅದರಲ್ಲಿ ಈ ಲೋಪ ಉಂಟಾಗಿದೆ’ ಎಂದು ಆಭಿಲಾಷಾ ಹೇಳಿದ್ದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.
ಮತದಾರರ ಗುರುತಿನ ಚೀಟಿ ಮುದ್ರಿಸುವ ಏಜೆನ್ಸಿಯೇ ಈ ಲೋಪಕ್ಕೆ ಕಾರಣ ಎಂದು ಮಹಿಳೆಯ ಪತಿ ಚಂದನ್‌ಕುಮಾರ್ ಆರೋಪಿಸಿದ್ದು, ‘ಮಹಿಳೆಯೊಬ್ಬರ ಗುರುತಿನ ಚೀಟಿಯಲ್ಲಿ ರಾಜ್ಯದ ಮುಖ್ಯಮಂತ್ರಿಯ ಭಾವಚಿತ್ರ ಕಾಣಿಸಿಕೊಂಡಿರುವುದು ಬಲುದೊಡ್ಡ ಲೋಪ’ ಎಂದಿದ್ದಾರೆ.
‘ಗುರುತಿನ ಚೀಟಿಯಲ್ಲಿ ಎಲ್ಲ ಮಾಹಿತಿ ಸರಿಯಾಗಿದೆ. ಆದರೆ, ಫೋಟೋ ನಿತೀಶ್ ಕುಮಾರ್ ಅವರದ್ದು. ಇದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ದೂರಿದ್ದಾರೆ.
ಈ ಲೋಪವನ್ನು ಮುಂದಿಟ್ಟುಕೊಂಡು ವಿವಿಧ ರಾಜಕೀಯ ಪಕ್ಷಗಳು ಬಿಹಾರದ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿವೆ. ‘ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಗಂಭೀರ ನಿರ್ಲಕ್ಷ್ಯ ಇದು’ ಎಂದು ತೃಣಮೂಲ ಕಾಂಗ್ರೆಸ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಲೋಪ ಉಂಟಾಗಿರುವುದನ್ನು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಯ ಗಮನಕ್ಕೆ ತಂದಾಗ, ‘ಈ ವಿಚಾರ ಯಾರಿಗೂ ತಿಳಿಸಬೇಡಿ ಎಂದಿದ್ದಾರೆ’ ಎಂಬುದಾಗಿ ದಂಪತಿ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.