ADVERTISEMENT

ಬಿಹಾರ: ಏಳನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 14:17 IST
Last Updated 16 ನವೆಂಬರ್ 2020, 14:17 IST
ನಿತೀಶ್‌ ಕುಮಾರ್‌ ಪ್ರಮಾಣವಚನ
ನಿತೀಶ್‌ ಕುಮಾರ್‌ ಪ್ರಮಾಣವಚನ    

ಪಟ್ನಾ: ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಬಿಜೆಪಿಯ ಇಬ್ಬರು ಶಾಸಕರು ಉಪಮುಖ್ಯಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ನಿತೀಶ್‌ ಕುಮಾರ್‌ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗವರ್ನರ್ ಫಾಗೂ ಚೌಹಾಣ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಮುಖಂಡರು ಭಾಗಿಯಾದರು.

2000ರಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ನಿತೀಶ್ ಕುಮಾರ್, ಎರಡು ದಶಕಗಳಲ್ಲಿ ಏಳು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ADVERTISEMENT

69 ವರ್ಷದ ನಿತೀಶ್ ಕುಮಾರ್ 2005ರ ನವೆಂಬರ್ನಿಂದ ನಿರಂತರವಾಗಿ ಬಿಹಾರ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದಾರೆ. ನಾಲ್ಕನೇ ಅವಧಿಗೆ ಅವರು ಅಧಿಕಾರ ವಹಿಸಿದಂತಾಗಿದೆ. 2014-15ರ ಅವಧಿಯಲ್ಲಿ ಜಿತಿನ್ ರಾಮ್ ಮಾಂಝಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು.

ಬಿಜೆಪಿ ಶಾಸಕರಾದ ತಾರಕಿಶೋರ್‌ ಪ್ರಸಾದ್‌ ಮತ್ತು ರೇಣು ದೇವಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಜೆಡಿಯುನ ಐವರು, ಬಿಜೆಪಿಯ ಏಳು ಮಂದಿ ಹಾಗೂ ಎಚ್‌ಎಎಂ, ವಿಐಪಿಯ ತಲಾ ಒಬ್ಬರು ಸೇರಿ ಒಟ್ಟು 15 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು:
* ವಿಜಯ್‌ ಕುಮಾರ್‌ ಚೌಧರಿ–ಜೆಡಿಯು
* ವಿಜೇಂದ್ರ ಪ್ರಸಾದ್‌ ಯಾದವ್–ಜೆಡಿಯು
* ಅಶೋಕ್‌ ಚೌಧರಿ–ಜೆಡಿಯು
* ಮೇವಾ ಲಾಲ್‌ ಚೌಧರಿ–ಜೆಡಿಯು
* ಸಂತೋಶ್‌ ಕುಮಾರ್‌ ಸುಮನ್‌ (ಹಿಂದುಸ್ತಾನಿ ಆವಾಂ ಮೋರ್ಚಾದ (ಎಚ್‌ಎಎಂ) ಮುಖ್ಯಸ್ಥ ಜಿತಿನ್‌ ರಾಮ್‌ ಮಾಂಝಿ ಅವರ ಪುತ್ರ)
* ಮುಕೇಶ್‌ ಸಾಹ್ನಿ– ವಿಐಪಿ (ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿ)
* ಮಂಗಲ್‌ ಪಾಂಡೆ–ಬಿಜೆಪಿ
* ಅಮರಿಂದರ್‌ ಪ್ರತಾಪ್‌ ಸಿಂಗ್–ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.