ADVERTISEMENT

ಬಿಹಾರ ಸಿಎಂ ನಿತೀಶ್‌ ಕುಮಾರ್‌ಗಿಂತಲೂ ಅವರ ಮಗನೇ ಶ್ರೀಮಂತ! ಆಸ್ತಿ ವಿವರ ಬಹಿರಂಗ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 3:09 IST
Last Updated 2 ಜನವರಿ 2021, 3:09 IST
ನಿತೀಶ್‌ ಕುಮಾರ್‌ (ಪಿಟಿಐ ಸಂಗ್ರಹ ಚಿತ್ರ)
ನಿತೀಶ್‌ ಕುಮಾರ್‌ (ಪಿಟಿಐ ಸಂಗ್ರಹ ಚಿತ್ರ)   

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗಿಂತ ಅವರ ಮಗ ನಿಶಾಂತ್ ಐದು ಪಟ್ಟು ಹೆಚ್ಚು ಶ್ರೀಮಂತ.

ಎಂಜಿನಿಯರಿಂಗ್ ಪದವೀಧರನಾಗಿರುವ ನಿಶಾಂತ್ ₹3.62 ಕೋಟಿ ಮೌಲ್ಯದ ಸ್ವತ್ತುಗಳನ್ನು ಹೊಂದಿದ್ದರೆ, ನಿತೀಶ್ ಅವರು ₹56.5 ಲಕ್ಷ ಮೌಲ್ಯದ ಸ್ವತ್ತುಗಳ ಒಡೆಯರಾಗಿದ್ದಾರೆ. ಇವರು 1989ರ ಡಿಸೆಂಬರ್‌ನಿಂದಲೂ ಕೇಂದ್ರ ಸಚಿವ ಅಥವಾ ಮುಖ್ಯಮಂತ್ರಿಯಾಗಿದ್ದಾರೆ (1990–98ರ ಅವಧಿ ಬಿಟ್ಟು).

ನಿತೀಶ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಡಿಸೆಂಬರ್ 31ರಂದು ಅವರ ಸ್ವತ್ತುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. 2010ರಿಂದ ನಿತೀಶ್ ಅವರು ಸ್ವತ್ತುಗಳ ವಿವರ ಬಹಿರಂಗಪಡಿಸುವ ವಿಧಾನ ಅನುಸರಿಸಿಕೊಂಡು ಬಂದಿದ್ದಾರೆ.

ADVERTISEMENT

ಬಿಹಾರ ಮುಖ್ಯಮಂತ್ರಿಯವರ ಬಳಿ ಇರುವ ಚರಾಸ್ತಿ ₹16.53 ಲಕ್ಷ ಆಗಿದ್ದರೆ, ಸ್ಥಿರಾಸ್ತಿ (ದೆಹಲಿಯ ದ್ವಾರಕಾದಲ್ಲಿರುವ ಫ್ಲ್ಯಾಟ್) ₹40 ಲಕ್ಷ ಮೌಲ್ಯದ್ದಾಗಿದೆ. ಫೋರ್ಡ್‌ ವಾಹನ ಹಾಗೂ 12 ದನಗಳು ಅವರ ಒಡೆತನದಲ್ಲಿವೆ.

ಅವರ ಒಬ್ಬನೇ ಪುತ್ರನಾಗಿರುವ, ಉದ್ಯಮಿ ನಿಶಾಂತ್ ಬಳಿ ₹1.57 ಕೋಟಿ ಮೌಲ್ಯದ ಚರಾಸ್ತಿಯಿದೆ. ₹1.48 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. 2016ರ ಮಾದರಿಯ ಕಾರು, ₹20 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ನಿಶಾಂತ್ ಹೆಚ್ಚಿನ ಆಸ್ತಿ ದಶಕದ ಹಿಂದೆ ಮೃತಪಟ್ಟಿದ್ದ ಅವರ ತಾಯಿ, ಶಿಕ್ಷಕಿಯಾಗಿದ್ದ ಮಂಜು ಸಿನ್ಹಾ ಅವರಿಂದ ಬಂದಿರುವುದಾಗಿದೆ.

ನಿತೀಶ್ ಅವರ ಸಂಪುಟ ಸಹೋದ್ಯೋಗಿ, ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಕೇಶ್ ಸಾಹ್ನಿ ಅವರು ₹12.34 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಶ್ರೀಮಂತ ಸಚಿವರಾಗಿದ್ದಾರೆ. ಇವರು ಸದ್ಯ ನಿತೀಶ್ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದಾರೆ.

ನಿತೀಶ್ ಸಂಪುಟದಲ್ಲಿ ಅತಿ ಕಡಿಮೆ ಆಸ್ತಿ ಹೊಂದಿರುವ ಸಚಿವರೆಂದರೆ ರಾಮ್ ಪ್ರೀತ್ ಪಾಸ್ವಾನ್. ಇವರು ಹೊಂದಿರುವ ಆಸ್ತಿ ಮೌಲ್ಯ ₹95 ಲಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.