ನವದೆಹಲಿ: ದೇಶದ ಕೆಲವೆಡೆ ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ(ಐಸಿಎಂಆರ್) ಮಹಾನಿರ್ದೇಶಕ ಡಾ. ರಾಜೀವ್ ಬೆಲ್, ಪ್ರಸ್ತುತ ಸೋಂಕಿನ ತೀವ್ರತೆ ಸೌಮ್ಯವಾಗಿದ್ದು, ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.
ಹೊಸ ಕೋವಿಡ್ ರೂಪಾಂತರಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದ ಅವರು, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಸಂಗ್ರಹಿಸಿದ ಮಾದರಿಗಳ ಜೀನೋಮ್ ಅನುಕ್ರಮವು ಹೊಸ ರೂಪಾಂತರಗಳು ಸೌಮ್ಯವಾಗಿದ್ದು, ಅವು ಓಮಿಕ್ರಾನ್ ಉಪ ರೂಪಾಂತರಗಳಾಗಿವೆ ಎಂದು ತೋರಿಸಿದೆ ಎಂದು ಹೇಳಿದ್ದಾರೆ.
ಓಮಿಕ್ರಾನ್‌ನ ಉಪ ರೂಪಾಂತರಗಳೆಂದರೆ ಎಲ್‌ಎಫ್.7, ಎಕ್ಸ್‌ಎಫ್‌ಜಿ, ಜೆಎನ್.1 ಮತ್ತು ಎನ್‌ಬಿ. 1.8.1 ಗಳು.
ಮೊದಲ ಮೂರು ಉಪ ರೂಪಾಂತರಗಳು(ಎಲ್‌ಎಫ್.7, ಎಕ್ಸ್‌ಎಫ್‌ಜಿ, ಜೆಎನ್.1) ಹೆಚ್ಚು ಪ್ರಚಲಿತವಾಗಿವೆ. ದೇಶದ ವಿವಿಧೆಡೆಯಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಹೆಚ್ಚಿನ ರೂಪಾಂತರಗಳಿವೆಯೇ ಎಂದು ನಮಗೆ ಒಂದು ಅಥವಾ ಎರಡು ದಿನಗಳಲ್ಲಿ ತಿಳಿಯುತ್ತದೆ ಎಂದೂ ಅವರು ಹೇಳಿದ್ದಾರೆ.
ಮೊದಲು ದಕ್ಷಿಣದಲ್ಲಿ, ನಂತರ ಪಶ್ಚಿಮ ಭಾರತದಲ್ಲಿ ಮತ್ತು ಈಗ ಉತ್ತರ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಎಲ್ಲ ಪ್ರಕರಣಗಳನ್ನು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ(ಐಡಿಎಸ್‌ಪಿ) ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದಲ್ಲದೆ, ಐಸಿಎಂಆರ್‌ನ ರಾಷ್ಟ್ರವ್ಯಾಪಿ ಉಸಿರಾಟ ಸಂಬಂಧಿತ ವೈರಸ್ ಸೆಂಟಿನೆಲ್ ಕಣ್ಗಾವಲು ಜಾಲವು ಹೊರಹೊಮ್ಮುತ್ತಿರುವ ಸೋಂಕುಗಳು ಮತ್ತು ರೋಗಕಾರಕಗಳ ಮೇಲೆ ನಿಗಾ ಇಡುತ್ತಿದೆ ಎಂದು ಹೇಳಿದ್ದಾರೆ.
ಕೋವಿಡ್ ಪ್ರಕರಣಗಳು ಹೆಚ್ಚಾದಾಗಲೆಲ್ಲ ನಾವು ಮೂರು ವಿಷಯಗಳನ್ನು ನೋಡುತ್ತೇವೆ. ಮೊದಲನೆಯದು ಅದು ಯಾವ ಪ್ರಮಾಣದಲ್ಲಿ ಹರಡುತ್ತದೆ. ಪ್ರಕರಣಗಳು ಎಷ್ಟು ವೇಗವಾಗಿ ಹೆಚ್ಚುತ್ತಿವೆ ಎಂಬುದ್ದಾಗಿದೆ. ಈ ಹಿಂದೆ ಎರಡು ದಿನಗಳಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿದ್ದನ್ನು ನೋಡಿದ್ದೇವೆ. ಆದರೆ, ಈ ಬಾರಿ ಹಾಗಿಲ್ಲ ಎಂದಿದ್ದಾರೆ.
ಎರಡನೆಯದಾಗಿ, ಹೊಸ ರೂಪಾಂತರಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ತಪ್ಪಿಸುತ್ತಿವೆಯೇ? ಎಂಬುದನ್ನು ಗಮನಿಸುತ್ತೇವೆ. ಈ ಬಾರಿ ಆ ರೀತಿಯ ಯಾವುದೇ ಭಯವಿಲ್ಲ ಎಂದಿದ್ದಾರೆ.
ಮೂರನೆಯ ಅಂಶವೆಂದರೆ ಎಲ್ಲಾ ಕೋವಿಡ್ ಪ್ರಕರಣಗಳಲ್ಲಿ ತೀವ್ರತರವಾದ ಪ್ರಕರಣಗಳ ಶೇಕಡಾವಾರು ಲೆಕ್ಕಾಚಾರ ಹಾಕುತ್ತೇವೆ. ಆದರೆ, ಈಗ ಕಂಡುಬಂದಿರುವ ಕೋವಿಡ್ ಸೋಂಕಿನಲ್ಲಿ ತೀವ್ರತೆ ಸೌಮ್ಯವಾಗಿದೆ. ಆದರೂ ನಾವು ಜಾಗರೂಕರಾಗಿರಬೇಕು ಮತ್ತು ಯಾವಾಗಲೂ ಯಾವುದೇ ಪರಿಸ್ಥಿತಿಗೆ ಸಿದ್ಧರಾಗಿರಬೇಕು ಎಂದು ಐಸಿಎಂಆರ್ ಡಿಜಿ ಪ್ರತಿಪಾದಿಸಿದ್ಧರೆ.
ಅತ್ಯಂತ ನಿಕಟವಾಗಿ ಕೋವಿಡ್ ಹೊಸ ರೂಪಾಂತರಗಳ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕು. ಸದ್ಯ, ಆತಂಕಕ್ಕೆ ಯಾವುದೇ ಕಾರಣವಿಲ್ಲ. ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಸಹ ಹೊಸ ರೂಪಾಂತರವು ಸೌಮ್ಯವಾಗಿದೆ ಎ*ದು ಹೇಳಿದೆ. ಬುಸ್ಟರ್ ಡೋಸ್ ಲಸಿಕೆ ಸದ್ಯ ಅಗತ್ಯವಿಲ್ಲ ಎಂದಿದ್ದಾರೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.