ಎಡಪ್ಪಾಡಿ ಕೆ. ಪಳನಿಸ್ವಾಮಿ
ಪಿಟಿಐ ಚಿತ್ರ
ಚೆನ್ನೈ: ‘ತಮಿಳುನಾಡಿನಲ್ಲಿ ಬಿಜೆಪಿ ಜತೆಗೆ ತಮ್ಮ ಪಕ್ಷದ ಮೈತ್ರಿ ಚುನಾವಣೆಗೆ ಮಾತ್ರ. ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಏಪ್ರಿಲ್ 11ರಂದು ಮೈತ್ರಿ ಘೋಷಿಸುವಾಗ, ‘ನಾವು ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ ಮತ್ತು ಒಟ್ಟಾಗಿ ಸರ್ಕಾರ ರಚಿಸುತ್ತೇವೆ. ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು’ ಎಂದು ಬಿಜೆಪಿಯ ತಂತ್ರಗಾರ ಅಮಿತ್ ಶಾ ಹೇಳಿದ್ದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ‘ಎರಡೂ ಪಕ್ಷಗಳು ಒಟ್ಟಾಗಿ ಹೋರಾಡುತ್ತವೆ ಮತ್ತು ಚುನಾವಣೆಯ ನಂತರ ಸರ್ಕಾರ ರಚಿಸುತ್ತವೆ ಎಂದು ಶಾ ಹೇಳಿದ್ದಾರೆ. ಆದರೆ ಅವರು ಸಮ್ಮಿಶ್ರ ಸರ್ಕಾರವೆಂದು ಹೇಳಿಲ್ಲ. ನೀವೇ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಮತ್ತು ಅದನ್ನು ದೊಡ್ಡ ವಿವಾದ ಮಾಡಿದ್ದೀರಿ. ಸರ್ಕಾರದಲ್ಲಿ ಬಿಜೆಪಿ ಪಾಲು ಇರುವುದಾಗಿ ಅವರು ಎಂದಿಗೂ ಹೇಳಿಲ್ಲ’ ಎಂದು ಅವರು, ‘ಎಐಎಡಿಎಂಕೆ ಸಮ್ಮಿಶ್ರ ಸರ್ಕಾರ ರಚಿಸಲು ಏಕೆ ಒಪ್ಪಿತು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಎನ್‌ಡಿಎಯನ್ನು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಮುಖ್ಯಸ್ಥರು ಮುನ್ನಡೆಸಲಿದ್ದಾರೆ ಎಂದು ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಅವರಲ್ಲಿ ತುಂಬಾ ಸ್ಪಷ್ಟತೆ ಇದೆ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.
‘ಮೈತ್ರಿ ಸರ್ಕಾರದ ಬಗ್ಗೆ ನಿರ್ಧಾರವನ್ನು ಅಮಿತ್ ಶಾ ಮತ್ತು ಪಳನಿಸ್ವಾಮಿ ಅವರು ತೆಗೆದುಕೊಳ್ಳುತ್ತಾರೆ. ಮೈತ್ರಿ ಕುರಿತು ಪಳನಿಸ್ವಾಮಿ ಅವರೊಂದಿಗೆ ಚರ್ಚಿಸಿರುವುದು ಕೇಂದ್ರ ಗೃಹ ಸಚಿವರು. ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸಲಾಗದು’ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಪ್ರತಿಕ್ರಿಯಿಸಿದ್ದಾರೆ.
ಡಿಎಂಕೆ ಸರ್ಕಾರದ ವಿರುದ್ಧದ ಮತಗಳ ವಿಭಜನೆ ತಡೆಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ನಮ್ಮ ಮೈತ್ರಿ ಬಗ್ಗೆ ಡಿಎಂಕೆ ಏಕೆ ಚಿಂತಿಸಬೇಕು? ಅವರಿಗೇಕೆ ಕಳವಳ?–ಎಡಪ್ಪಾಡಿ ಕೆ. ಪಳನಿಸ್ವಾಮಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.