ADVERTISEMENT

ಆರೋಪಿಗಳ ಮನೆ ಧ್ವಂಸ ಮಾಡುವುದು ಗ್ಯಾಂಗ್‌ವಾರ್‌ಗೆ ಸಮ: ಗುವಾಹಟಿ ಹೈಕೋರ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2022, 8:34 IST
Last Updated 19 ನವೆಂಬರ್ 2022, 8:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ‘ಆರೋಪಿಯ ಮನೆ ಧ್ವಂಸ ಮಾಡುವ ಅವಕಾಶ ಯಾವ ಅಪರಾಧ ಕಾನೂನಿನಲ್ಲಿಯೂ ಇಲ್ಲ, ಹೀಗೆ ಮಾಡುವುದು ಗ್ಯಾಂಗ್‌ ವಾರ್‌ಗೆ ಸಮ‘ ಎಂದು ಗುವಾಹಟಿ ಹೈ ಕೋರ್ಟ್‌ ಹೇಳಿದೆ.

ಆ ಮೂಲಕ ಅಪರಾಧ ಚುಟುವಟಿಕೆಯಲ್ಲಿ ಭಾಗಿಯಾದವರ ಮನೆ, ಆಸ್ತಿ-ಪಾಸ್ತಿ ಕೆಡವಿದ ಅಸ್ಸಾಂನ ಬಿಜೆಪಿ ಸರ್ಕಾರಕ್ಕೆ ಹೈ ಕೋರ್ಟ್‌ ಚಾಟಿ ಬೀಸಿದೆ.

ನಗಾಂವ್‌ ಜಿಲ್ಲೆಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಇಟ್ಟ ಆರೋಪಿಗಳ ಮನೆ ಧ್ವಂಸ ಪ್ರಕರಣದ ದೂರನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದ ಗುವಾಹಟಿ ಹೈ ಕೋರ್ಟ್‌ ಹೀಗೆ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಸರ್ಕಾರದ ಈ ಕೃತ್ಯವನ್ನು ಗ್ಯಾಂಗ್‌ವಾರ್‌ಗೆ ಹೋಲಿಕೆ ಮಾಡಿದೆ.

ADVERTISEMENT

ಕೆಲ ತಿಂಗಳ ಹಿಂದೆ, ಸ್ಥಳೀಯ ಮೀನು ವ್ಯಾಪಾರಿ ಸಫೀಕುಲ್‌ ಇಸ್ಲಾಂ (39) ಎಂಬವರನ್ನು ಬಂಧಿಸಿದ್ದರು. ಬಂಧನದ ಮರುದಿನವೇ, ಪೊಲೀಸರ ಸುಪರ್ದಿಯಲ್ಲಿರುವಾಗಲೇ ಸಫೀಕುಲ್‌ ಅವರು ಮೃತ‍‍ಪಟ್ಟಿದ್ದರು. ಇದಾದ ಬಳಿಕ ಮೇ 21 ರಂದು ಬತದ್ರಾವ ಪೊಲೀಸ್‌ ಠಾಣೆಗೆ ಉದ್ರಿಕ್ತರ ಗುಂಪೊಂದು ಬೆಂಚಿ ಹಚ್ಚಿತ್ತು.

ಈ ಘಟನೆ ನಡೆದ ಮರುದಿನವೇ ಜಿಲ್ಲಾಡಳಿತ ಸಫೀಕುಲ್‌ ಅವರದ್ದೂ ಸೇರಿ, ಕನಿಷ್ಠ 6 ಮನೆಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಿತ್ತು. ಮನೆಯ ಡ್ರಗ್ಸ್‌ ಅಥವಾ ಆಯುಧಗಳಿವೆಯೇ ಎಂದು ಶೋಧನೆ ಮಾಡಲೋಸುಗ ಧ್ವಂಸ ಮಾಡಲಾಗಿದೆ ಎಂದು ಜಿಲ್ಲಾಡಳಿತ ಕಾರಣ ನೀಡಿತ್ತು.

‘ಯಾವುದೇ ಗಂಭೀರ ವಿಚಾರದ ತನಿಖೆಯ ವೇಳೆಯೂ, ಅರೋಪಿಗಳ ಮನೆ ಬುಲ್ಡೋಜರ್‌ನಿಂದ ಧ್ವಂಸ ಮಾಡುವ ಅವಕಾಶ ಯಾವ ಅಪರಾಧ ಕಾನೂನಿನಲ್ಲಿಯೂ ಇಲ್ಲ‘ ಎಂದು ಮುಖ್ಯನ್ಯಾಯಮೂರ್ತಿ ಆರ್‌ಎಂ ಛಾಯಾ ಅಭಿ‍ಪ್ರಾಯ ಪಟ್ಟಿದ್ದಾರೆ.

‘ಒಂದು ಮನೆ ಪರಿಶೋಧನೆ ನಡೆಸುವುದಿದ್ದರೂ ಅನುಮತಿ ಬೇಕು. ನಾಳೆ ನಿಮಗೆ ಏನಾದರೂ ಬೇಕು ಎಂದಾದರೆ, ಕೋರ್ಟ್‌ ಅಂಗಳವನ್ನೂ ಅಗೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

‘ತನಿಖೆಯ ಹೆಸರಲ್ಲಿ ಒಬ್ಬರ ಮನೆ ಧ್ವಂಸ ಮಾಡುತ್ತಾ ಹೋದರೆ, ಇಲ್ಲಿ ಯಾರೂ ಸುರಕ್ಷಿತರಲ್ಲ. ನಾವು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿದ್ದೇವೆ‘ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ, ಧ್ವಂಸಗೊಂಡ ಮನೆಯಿಂದ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ ಎನ್ನುವ ಹೇಳಿಕೆಗೆ, ‘ಅದು ಕಟ್ಟುಕತೆ ಯಾಕಾಗಿರಬಾರದು?‘ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ.

ಮನೆಯನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡುವ ಪ್ರಕ್ರಿಯೆಯನ್ನು ನಾವು ಸಿನಿಮಾದಲ್ಲಿ ನೋಡುತ್ತಿದ್ದೆವು. ಅದರಲ್ಲೂ ಧ್ವಂಸಕ್ಕೂ ಮುನ್ನ ಸರ್ಚ್‌ ವಾರೆಂಟ್‌ ನೀಡಲಾಗುತ್ತಿತ್ತು ಎಂದು ಹೇಳಿದರು.

ಬುಲ್ಡೋಜರ್‌ನಿಂದ ಮನೆ ಧ್ವಂಸ ಮಾಡುವ ಪ್ರಕ್ರಿಯೆಯನ್ನು ಗ್ಯಾಂಗ್‌ ವಾರ್‌ಗೆ ಹೋಲಿಕೆ ಮಾಡಿರುವ ನ್ಯಾಯಾಧೀಶರು, ತನಿಖೆ ನಡೆಸಲು ಬೇರೆ ಮಾರ್ಗ ಅನುಸರಿಸಿ ಎಂದು ಸೂಚನೆ ನೀಡಿದ್ದಾರೆ.

‘ಕಾನೂನು ಹಾಗೂ ಸುವ್ಯವಸ್ಥೆ‘ ಎನ್ನುವ ಪದಗಳು ಒಟ್ಟಾಗಿ ಬಳಸಲು ಒಂದು ಕಾರಣವಿದೆ. ಇದು ಕಾನೂನು ಸುವ್ಯವಸ್ಥೆ ಕಾಪಾಡುವ ವಿಧಾನವಲ್ಲ ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.