ADVERTISEMENT

ಮಾತೃತ್ವ ರಜೆ | ತಾರತಮ್ಯಕ್ಕೆ ಅವಕಾಶ ಇಲ್ಲ: ಕಲ್ಕತ್ತ ಹೈಕೋರ್ಟ್‌

ಪಿಟಿಐ
Published 28 ಫೆಬ್ರುವರಿ 2024, 15:19 IST
Last Updated 28 ಫೆಬ್ರುವರಿ 2024, 15:19 IST
ಕಲ್ಕತ್ತ ಹೈಕೋರ್ಟ್‌
ಕಲ್ಕತ್ತ ಹೈಕೋರ್ಟ್‌   

ಕೋಲ್ಕತ್ತ: ಮಾತೃತ್ವ ರಜೆಯ ವಿಚಾರದಲ್ಲಿ ಗುತ್ತಿಗೆ ನೌಕರರು ಹಾಗೂ ಕಾಯಂ ನೌಕರರಿಗೆ ಭಿನ್ನ ನಿಯಮಗಳನ್ನು ಅನ್ವಯಿಸಲು ಅವಕಾಶವಿಲ್ಲ ಎಂದು ಹೇಳಿರುವ ಕಲ್ಕತ್ತ ಹೈಕೋರ್ಟ್, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಪರಿಹಾರದ ರೂಪದಲ್ಲಿ, ಸಂಬಳ ಸಹಿತ ಮಾತೃತ್ವ ರಜೆಯನ್ನು ಕೊಡುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ನಿರ್ದೇಶನ ನೀಡಿದೆ.

ಅರ್ಜಿದಾರ ಮಹಿಳೆಯು 2011ರ ಆಗಸ್ಟ್‌ನಲ್ಲಿ ಆರ್‌ಬಿಐಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದರು. ತಮಗೆ 180 ದಿನಗಳ ಸಂಬಳ ಸಹಿತ ಮಾತೃತ್ವ ರಜೆಯನ್ನು ಆರ್‌ಬಿಐ ನೀಡದೆ ಇದ್ದುದನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್.ಬಿ. ಚೌಧರಿ ನಡೆಸಿದ್ದರು.

ಆರ್‌ಬಿಐ ತನ್ನ ನೌಕರರಿಗೆ ಮಾತೃತ್ವ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ಈ ಸೌಲಭ್ಯಗಳನ್ನು ಅರ್ಜಿದಾರರಿಗೆ ನೀಡದೆ ಇರುವುದು ತಾರತಮ್ಯದ ನಡೆ. ಇಂಥದ್ದಕ್ಕೆ ಅವಕಾಶ ಇಲ್ಲ ಎಂದು ಚೌಧರಿ ಅವರು ಆದೇಶದಲ್ಲಿ ಹೇಳಿದ್ದಾರೆ. ಅರ್ಜಿದಾರರಿಗೆ ಮಾತೃತ್ವ ರಜೆಯನ್ನು ನೀಡದೆ ಇರುವುದು ‘ಮಾತೃತ್ವ ಸೌಲಭ್ಯಗಳ ಕಾಯ್ದೆ 1961’ರ ಅನ್ವಯ ಅಪರಾಧ ಎಂದು ಕೂಡ ಅವರು ಹೇಳಿದ್ದಾರೆ.

ADVERTISEMENT

ಮಹಿಳೆಗೆ ಮಾತೃತ್ವದ ಸೌಲಭ್ಯಗಳನ್ನು ನಿರಾಕರಿಸಲು ಆರ್‌ಬಿಐಗೆ ಅನುವು ಮಾಡಿಕೊಟ್ಟರೆ, ಸಂಬಳ ರಹಿತ ರಜೆಯನ್ನು ಮಾತ್ರ ಆಕೆಗೆ ನೀಡಿದರೆ, ಅಂತಹ ಕ್ರಮವು ತುಂಬು ಗರ್ಭಿಣಿಯಾಗಿದ್ದಾಗಲೂ ಆ ಮಹಿಳೆಗೆ ಕೆಲಸ ಮಾಡಲು ಒತ್ತಾಯಿಸಿದಂತೆ ಆಗಬಹುದು. ಆಗ ಆಕೆಯ ಹಾಗೂ ಭ್ರೂಣದ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ನ್ಯಾಯಮೂರ್ತಿ ಬಸು ಅವರು ಆದೇಶದಲ್ಲಿ ಹೇಳಿದ್ದಾರೆ.

‘ಆ ರೀತಿ ಮಾಡಿದರೆ ಸಾಮಾಜಿಕ ನ್ಯಾಯದ ಉದ್ದೇಶವು ಈಡೇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅರ್ಜಿದಾರ ಮಹಿಳೆಯು ಆರು ತಿಂಗಳ ಮಾತೃತ್ವ ರಜೆ ಕೋರಿ 2012ರ ನವೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದರು. ಮನವಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಆರ್‌ಬಿಐ ಕಡೆಯಿಂದ ಯಾವುದೇ ಸಂದೇಶ ಬಂದಿರಲಿಲ್ಲ. ಆದರೆ 2013ರ ಮಾರ್ಚ್‌ನಲ್ಲಿ ಪತ್ರವೊಂದನ್ನು ರವಾನಿಸಿದ ಆರ್‌ಬಿಐ, ಗುತ್ತಿಗೆ ನಿಯಮಗಳ ಅಡಿಯಲ್ಲಿ ತಮಗೆ ಮಾತೃತ್ವ ರಜೆ ನೀಡಲು ಅವಕಾಶ ಇಲ್ಲ ಎಂದು ಹೇಳಿತು. ಕರ್ತವ್ಯಕ್ಕೆ ಗೈರಾದರೆ ಅದನ್ನು ಸಂಬಳ ರಹಿತ ರಜೆ ಎಂದು ಪರಿಗಣಿಸಲಾಗುತ್ತದೆ ಎಂದು ಕೂಡ ತಿಳಿಸಲಾಯಿತು.

ಅತ್ಯಂತ ಕಿರಿಯ ಅಧಿಕಾರಿ ಹುದ್ದೆಯಲ್ಲಿ ಇರುವವರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳು ಮಾತ್ರ ತಮಗೆ ಸಿಗುತ್ತವೆ ಎಂದು ಮಹಿಳೆಗೆ ಆರ್‌ಬಿಐ ಅಧಿಕಾರಿಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.