ನವದೆಹಲಿ: ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಯಾವುದೇ ಮತದಾರನ ಹೆಸರನ್ನು ಮುಂಚಿತವಾಗಿ ನೋಟಿಸ್ ನೀಡದೆ ಕೈಬಿಡುವುದಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕರಡು ಮತದಾರರ ಪಟ್ಟಿಯಲ್ಲಿ ಸೇರಿಸದ ಮತದಾರರ ಹೆಸರುಗಳನ್ನು ಒಳಗೊಂಡ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸುವುದು ಅಥವಾ ಹಂಚಿ ಕೊಳ್ಳುವುದು ಕಡ್ಡಾಯವಲ್ಲ. ಅದೇ ರೀತಿ, ಒಬ್ಬನ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಕಾರಣಗಳನ್ನು ಕೊಡುವ ಅಗತ್ಯವೂ ಇಲ್ಲ ಎಂದು ಆಯೋಗ ತನ್ನ ಪ್ರತ್ಯೇಕ ಉತ್ತರದಲ್ಲಿ ಹೇಳಿದೆ.
ಬಿಹಾರದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಕೆಲವು ದಿನಗಳ ನಂತರ, ಚುನಾವಣಾ ಆಯೋಗವು ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದೆ. ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ನಂತರ, ಪಟ್ಟಿಯಿಂದ ಅಂದಾಜು 65 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದೆ. ಹೆಚ್ಚಿನವರು ಮೃತಪಟ್ಟಿದ್ದಾರೆ ಅಥವಾ ವಲಸೆ ಹೋಗಿದ್ದಾರೆ ಎಂದು ಆಯೋಗ ಹೇಳಿದೆ.
ಮತದಾರರ ಪಟ್ಟಿ ಪರಿಷ್ಕರಣೆಯ ಸಮಯದಲ್ಲಿ ಅರ್ಜಿ ನಮೂನೆಗಳನ್ನು ಸಲ್ಲಿಸದ ಸುಮಾರು 65 ಲಕ್ಷ ಮತದಾರರ ಹೆಸರು ಮತ್ತು ವಿವರಗಳು, ಅವರ ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆವಾರು ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ, ಆಯೋಗ ತನ್ನ ಉತ್ತರ ಸಲ್ಲಿಸಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಚುನಾವಣಾ ಆಯೋಗ ತನ್ನ ಹೆಚ್ಚುವರಿ ಪ್ರಮಾಣಪತ್ರದಲ್ಲಿ, ಎಸ್‌ಐಆರ್‌ನ ಮೊದಲ ಹಂತವನ್ನು ಪೂರ್ಣಗೊಳಿಸಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 1ರಂದು ಪ್ರಕಟಿಸಲಾಗಿದೆ ಎಂದು ಹೇಳಿದೆ. ‘ಕರಡು ಮತದಾರರ ಪಟ್ಟಿ ಯಿಂದ ಯಾವುದೇ ಮತದಾರನ ಹೆಸರು ಕೈಬಿಡುವಾಗ ಆತನಿಗೆ ಮುಂಚಿತವಾಗಿ ನೋಟಿಸ್ ನೀಡಲಾಗುವುದು. ತನ್ನ ವಾದ ಮಂಡಿಸಲು ಹಾಗೂ ಸಂಬಂಧಿತ ದಾಖಲೆಗಳನ್ನು ಒದಗಿಸಲು ಸೂಕ್ತ ಕಾಲಾ ವಕಾಶ ನೀಡಲಾಗುವುದು’ ಎಂದಿದೆ.
ಎಸ್‌ಐಆರ್ ನಂತರ, ಪಟ್ಟಿಯಿಂದ ಕೈಬಿಡಲಾದ ಅಂದಾಜು 65 ಲಕ್ಷ ಮತದಾರರ ವಿವರವನ್ನು ಆ.9ರೊಳಗೆ ಸಲ್ಲಿಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಬಿಹಾರದಲ್ಲಿ ಮತದಾರರ ಕರಡು ಪಟ್ಟಿ ಪ್ರಕಟವಾಗಿ 10 ದಿನಗಳು ಕಳೆದರೂ ಯಾವುದೇ ಪಕ್ಷಗಳು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 1ರಂದು ಪ್ರಕಟಿಸಲಾಗಿತ್ತು.
ಆಗಸ್ಟ್ 1ರಿಂದ ಆಗಸ್ಟ್ 10ರ (ಭಾನುವಾರ) ಮಧ್ಯಾಹ್ನ 3ರವರೆಗೆ, ವಿವಿಧ ರಾಜಕೀಯ ಪಕ್ಷಗಳು ನೇಮಿಸಿರುವ ಬೂತ್ ಮಟ್ಟದ ಏಜೆಂಟರು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದೆ. ಕರಡು ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳು ಸಲ್ಲಿಸಲು ಚುನಾವಣಾ ಆಯೋಗವು ಸೆಪ್ಟೆಂಬರ್ 1ರವರೆಗೆ ಕಾಲಾವಕಾಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.