ADVERTISEMENT

ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಮಾತುಕತೆ ಸಾಧ್ಯವಿಲ್ಲ: ಕಿಸಾನ್ ಮೋರ್ಚಾ ಪಟ್ಟು

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ

ಪಿಟಿಐ
Published 2 ಫೆಬ್ರುವರಿ 2021, 10:22 IST
Last Updated 2 ಫೆಬ್ರುವರಿ 2021, 10:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸುವವರೆಗೂ, ಬಂಧಿತ ರೈತ ಹೋರಾಟಗಾರರನ್ನು ಬಿಡುಗಡೆ ಮಾಡುವರೆಗೂ ಸರ್ಕಾರದೊಂದಿಗೆ ಅಧಿಕೃತ ಮಾತುಕತೆ ಸಾಧ್ಯವಿಲ್ಲ ಎಂದು ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ವಿವಿಧ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಂಗಳವಾರ ಸ್ಪಷ್ಟಪಡಿಸಿದೆ.

ಪ್ರತಿಭಟನಾ ಸ್ಥಳದಲ್ಲಿ ಮಂಗಳವಾರ ಎಸ್‌ಕೆಎಂ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ‘ಈ ಬೇಡಿಕೆಗಳು ಈಡೇರುವವರೆಗೆ, ಅಧಿಕೃತವಾದ ಮಾತುಕತೆ ಸಾಧ್ಯವಿಲ್ಲ’ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಲ್ಲಿವರೆಗೂ ಸರ್ಕಾರದ ಕಡೆಯಿಂದಲೂ ಮಾತುಕತೆ ಕುರಿತು ಅಧಿಕೃತ ಪ್ರಸ್ತಾವವೂ ಬಂದಿಲ್ಲ ಎಂದು ಕಿಸಾನ್‌ ಮೋರ್ಚಾ ಹೇಳಿದೆ

ಸಭೆಯ ನಂತರ ಎಸ್‌ಕೆಎಂ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ‘ಸರ್ಕಾರ ಪ್ರತಿಭಟನಾಕಾರರ ವಿರುದ್ಧ ಪೊಲೀಸರು, ಅಧಿಕಾರಿಗಳ ಮೂಲಕ ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದೆ. ರೈತರು ಪ್ರತಿಭಟನೆಗೆ ಬಾರದಂತೆ ತಡೆಯಲು ಬ್ಯಾರಿಕೇಡ್‌, ಮುಳ್ಳು ತಂತಿಯ ಬೇಲಿಗಳನ್ನು ಹಾಕಿಸುತ್ತಿದೆ. ಒಳ ಭಾಗದ ರಸ್ತೆಗಳನ್ನು ಬಂದ್‌ ಮಾಡಿಸಿ, ಅಂತರ್ಜಾಲ ಸೇವೆಗಳನ್ನೂ ಸ್ಥಗಿತಗೊಳಿಸಿದೆ. ಬಿಜೆಪಿ–ಆರ್‌ಎಸ್‌ಎಸ್‌ ಕಾರ್ಯಕರ್ತರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನೂ ಮಾಡಿದೆ’ ಎಂದು ಉಲ್ಲೇಖಿಸಿದೆ.

ADVERTISEMENT

‘ವಿವಿಧ ರಾಜ್ಯಗಳಿಂದ ಪ್ರತಿಭಟನೆಗೆ ಬೃಹತ್ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿರುವುದನ್ನು ನೋಡಿ, ಸರ್ಕಾರಕ್ಕೆ ಭಯ ಉಂಟಾಗಿದೆ‘ ಎಂದು ಎಸ್‌ಕೆಎಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.