ADVERTISEMENT

ದೆಹಲಿ: ಗಣೇಶ ಚತುರ್ಥಿಯಂದು ಸಾರ್ವಜನಿಕ ಸಭೆ, ಗಣಪತಿ ವಿಸರ್ಜನೆಗೆ ನಿರ್ಬಂಧ

ಪಿಟಿಐ
Published 16 ಆಗಸ್ಟ್ 2020, 10:41 IST
Last Updated 16 ಆಗಸ್ಟ್ 2020, 10:41 IST
ಗಣೇಶ ಚತುರ್ಥಿಗೆ ಸಿದ್ಧತೆ
ಗಣೇಶ ಚತುರ್ಥಿಗೆ ಸಿದ್ಧತೆ   

ನವದೆಹಲಿ:ದೆಹಲಿ ಸರ್ಕಾರವು ಈ ಬಾರಿಯ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದು, ಸಮುದಾಯ ಆಚರಣೆ, ಸಾರ್ವಜನಿಕ ಸಭೆ ಮತ್ತು ವಿಗ್ರಹ ವಿಸರ್ಜನೆಗೆ ನಿಷೇಧ ಹೇರಿದೆ.

ಕೊರೊನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿದೆಹಲಿ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳ ಅಡಿಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ಕಾರಣದಿಂದ ಗಣೇಶ ಚತುರ್ಥಿಯಂದು ಸಮುದಾಯ ಆಚರಣೆಗೆ ಅನುಮತಿ ನೀಡಿಲ್ಲಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2015ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಯಮುನಾ ನದಿಯಲ್ಲಿ ವಿಗ್ರಹ ವಿಸರ್ಜನೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ADVERTISEMENT

‘ಕಳೆದ ವರ್ಷ ದೆಹಲಿ ಸರ್ಕಾರವು ಗಣೇಶ ವಿಸರ್ಜನೆಗಾಗಿ ಕೃತಕ ಕೊಳಗಳನ್ನು ನಿರ್ಮಿಸಿತ್ತು. ಆದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರೆ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಗಣೇಶ ವಿಸರ್ಜನೆಯನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ₹50,000 ದಂಡ ವಿಧಿಸಲಾಗುವುದು’ ಎಂದು ಅವರು ಹೇಳಿದರು.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಅನ್‌ಲಾಕ್‌–3 ಪ್ರಕ್ರಿಯೆ ಮಾರ್ಗಸೂಚಿಯಡಿ ಧಾರ್ಮಿಕ ಸಭೆ, ಸಾಮಾಜಿಕ ಸಭೆ, ಸಾರ್ವಜನಿಕ ಮೆರವಣಿಗೆಗಳಿಗೆ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.