ADVERTISEMENT

ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು: ಕಾನೂನು ಅಡ್ಡಿ ಇಲ್ಲ; ಸುಪ್ರೀಂ ಕೋರ್ಟ್

ಪಿಟಿಐ
Published 26 ಮೇ 2025, 15:47 IST
Last Updated 26 ಮೇ 2025, 15:47 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಧ್ಯಪ್ರದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸಲು ಕಾನೂನಿನ ಅಡ್ಡಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

ಮಧ್ಯಪ್ರದೇಶ ನ್ಯಾಯಾಧೀಶರ ಸಂಘ ಸಲ್ಲಿಸಿದ ವಿವರಣೆಯನ್ನು ಪರಿಶೀಲಿಸಿದ ಸುಪ‍್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್‌ ಮಸೀಹ್ ಅವರು ಇರುವ ವಿಭಾಗೀಯ ಪೀಠವು, ಈ ವಿಚಾರದ ಬಗ್ಗೆ, ಸಾಧ್ಯವಾದಷ್ಟು ಮಟ್ಟಿಗೆ ಎರಡು ತಿಂಗಳಲ್ಲಿ, ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅಲ್ಲಿನ ಹೈಕೋರ್ಟ್‌ಗೆ ಸೂಚನೆ ನೀಡಿದೆ.

ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಈಗಿರುವ 60 ವರ್ಷದಿಂದ 62 ವರ್ಷಕ್ಕೆ ಹೆಚ್ಚು ಮಾಡಬೇಕು ಎಂದು ನ್ಯಾಯಾಧೀಶರ ಸಂಘವು 2018ರಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ನಂತರ, ಇನ್ನೊಂದು ರಾಜ್ಯದಲ್ಲಿ ಪೂರ್ವನಿದರ್ಶನವನ್ನು ಪರಿಗಣಿಸಿ ನಿವೃತ್ತಿ ವಯಸ್ಸನ್ನು 61 ವರ್ಷಕ್ಕೆ ಹೆಚ್ಚು ಮಾಡಬೇಕು ಎಂದು ಅದು ಪೀಠಕ್ಕೆ ಮನವಿ ಮಾಡಿತು.

ADVERTISEMENT

ಇದೇ ಮನವಿಯನ್ನು ಸಂಘವು ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಿತ್ತು. ಆದರೆ ಅದು 2018ರಲ್ಲಿ ಮನವಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.