ADVERTISEMENT

ಇ.ಡಿ ಕ್ರಮ ಸಮರ್ಥನೀಯವಲ್ಲ: ಉಮರ್‌ ಅಬ್ದುಲ್ಲಾ

ಫಾರೂಕ್‌ ಅಬ್ದುಲ್ಲಾಗೆ ಸೇರಿದ ₹ 12 ಕೋಟಿ ಮೌಲ್ಯದ ಆಸ್ತಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 6:58 IST
Last Updated 20 ಡಿಸೆಂಬರ್ 2020, 6:58 IST
ಉಮರ್‌ ಅಬ್ದುಲ್ಲಾ
ಉಮರ್‌ ಅಬ್ದುಲ್ಲಾ   

ಶ್ರೀನಗರ: ‘ನನ್ನ ತಂದೆ ಫಾರೂಕ್‌ ಅಬ್ದುಲ್ಲಾ ಅವರಿಗೆ ಸೇರಿದ ₹ 12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಆದರೆ, ಈ ಕ್ರಮಕ್ಕೆ ಯಾವುದೇ ಸಮರ್ಥನೆಯೇ ಇಲ್ಲ’ ಎಂದು ಫಾರೂಕ್‌ ಅಬ್ದುಲ್ಲಾ ಪುತ್ರ ಉಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು–ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ತನಿಖೆ ನಡೆಸುತ್ತಿರುವ ಇ.ಡಿ, ಈ ಸಂಬಂಧ ಫಾರೂಕ್‌ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿಯನ್ನು ಶನಿವಾರ ಜಪ್ತಿ ಮಾಡಿದೆ.

‘ಇ.ಡಿ ಜಪ್ತಿ ಮಾಡಿರುವ ಆಸ್ತಿಗಳ ಪೈಕಿ ಹೆಚ್ಚಿನವು ನಮ್ಮ ಪೂರ್ವಾರ್ಜಿತ. ಈ ಆಸ್ತಿಗಳನ್ನು 1970ರಿಂದ ಖರೀದಿ ಮಾಡಲಾಗಿದೆ. ಒಂದು ಕಟ್ಟಡವನ್ನು 2003ರಲ್ಲಿ ನಿರ್ಮಿಸಲಾಗಿದೆ. ನಮ್ಮಿಂದ ಏನೋ ಅಕ್ರಮ ನಡೆದಿದೆ ಎಂಬ ಕಾರಣ ನೀಡಿ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ತನ್ನ ಕ್ರಮಕ್ಕೆ ಸಮರ್ಥನೆ ನೀಡುವಲ್ಲಿ ಇ.ಡಿ ವಿಫಲವಾಗಲಿದೆ’ ಎಂದು ಉಮರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ನನ್ನ ತಂದೆ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಈ ವಿಷಯದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ಮಾಧ್ಯಮಗಳು ಅಥವಾ ಬಿಜೆಪಿ ನಿರ್ವಹಿಸುವ ಸಾಮಾಜಿಕ ಮಾಧ್ಯಮಗಳು ವಿಚಾರಣೆ ಬೇಕಿಲ್ಲ. ಕೋರ್ಟ್‌ನಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಯಲಿದ್ದು, ಈ ಕಾನೂನು ಹೋರಾಟದಲ್ಲಿ ಜಯ ಸಿಗುವ ವಿಶ್ವಾಸ ಇದೆ’ ಎಂದೂ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಆಸ್ತಿಯನ್ನು ಜಪ್ತಿ ಮಾಡುವ ಬಗ್ಗೆ ಇ.ಡಿ ನೀಡುವ ಅಧಿಕೃತ ನೋಟಿಸ್‌ ನನ್ನ ತಂದೆ ಕೈ ಸೇರುವ ಮುನ್ನವೇ, ಈ ವಿಷಯ ಮಾಧ್ಯಮಗಳಿಗೆ ಗೊತ್ತಾಗಿದೆ. ಆಸ್ತಿ ಜಪ್ತಿ ಕುರಿತ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದನ್ನೂ ನನ್ನ ತಂದೆ ಗಮನಿಸಿದ್ದಾರೆ. ಇದರಲ್ಲಿ ಅಚ್ಚರಿಪಡುವ ಸಂಗತಿ ಏನಿಲ್ಲ’ ಎಂದೂ ಟ್ವೀಟ್‌ ಮಾಡಿದ್ದಾರೆ.

‘ನಾನು ತಲೆ ಬಾಗುವಂತೆ ಮಾಡುವ ಉದ್ದೇಶದಿಂದಲೇ ಇ.ಡಿ ಮೂಲಕ ಇಂಥ ಕ್ರಮ ಕೈಗೊಳ್ಳಲಾಗಿದೆ. ಆದರೆ, ನಾನು ಯಾರಿಗೂ ತಲೆ ಬಾಗುವುದಿಲ್ಲ. ಇ.ಡಿ ತನ್ನ ಕೆಲಸ ಮಾಡಲಿ, ನಾನು ನನ್ನ ಕೆಲಸ ಮಾಡುವೆ’ ಎಂದು ಫಾರೂಕ್‌ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.