ADVERTISEMENT

ಮೋದಿ ಉತ್ತರಾಧಿಕಾರಿ ಕುರಿತ ಚರ್ಚೆ ಅನಗತ್ಯ: ರಾವುತ್‌ ವಿರುದ್ಧ ಫಡಣವೀಸ್ ಕಿಡಿ

ಮೋದಿ ನಿವೃತ್ತರಾಗಲಿದ್ದಾರೆ ಎಂದು ರಾವುತ್ ನೀಡಿರುವ ಹೇಳಿಕೆಗೆ ತಿರುಗೇಟು

ಪಿಟಿಐ
Published 31 ಮಾರ್ಚ್ 2025, 11:19 IST
Last Updated 31 ಮಾರ್ಚ್ 2025, 11:19 IST
<div class="paragraphs"><p>ದೇವೇಂದ್ರ ಫಡಣವೀಸ್‌ ಮತ್ತು ಸಂಜಯ್‌ ರಾವುತ್‌</p></div>

ದೇವೇಂದ್ರ ಫಡಣವೀಸ್‌ ಮತ್ತು ಸಂಜಯ್‌ ರಾವುತ್‌

   

ನಾಗ್ಪುರ/ ಮುಂಬೈ: ಪ್ರಧಾನಿ ನರೇಂದ್ರ ಮೋದಿ ಇನ್ನೂ ಹಲವು ವರ್ಷಗಳ ಕಾಲ ದೇಶವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ, ಮೋದಿ ಉತ್ತರಾಧಿಕಾರಿ ಬಗ್ಗೆ ಚರ್ಚೆ ಅನಗತ್ಯ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು. 

‘ಪ್ರಧಾನಿ ಸ್ಥಾನದಿಂದ ನಿವೃತ್ತಿಯಾಗುವ ಸಂದೇಶವನ್ನು ನೀಡಲು ಮೋದಿ ಅವರು ಭಾನುವಾರ ಆರ್‌ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ’ ಎಂಬ ಶಿವಸೇನಾ (ಯುಬಿಟಿ ಬಣ) ಮುಖಂಡ ಸಂಜಯ್ ರಾವುತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಫಡಣವೀಸ್, ‘2029ರಲ್ಲೂ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ’ ಎಂದು ತಿರುಗೇಟು ನೀಡಿದರು. 

ADVERTISEMENT

ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್ಎಸ್‌ನ ಹಿರಿಯ ಮುಖಂಡ ಸುರೇಶ್‌ ಭಯ್ಯಾಜಿ ಜೋಶಿ, ಪ್ರಧಾನಿಯನ್ನು ಬದಲಿಸುವ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹೀಗಾಗಿ, ಅವರ (ಮೋದಿ) ಉತ್ತರಾಧಿಕಾರಿ ಹುಡುಕುವ ಅನಿವಾರ್ಯತೆಯೇ ಇಲ್ಲ. ಅವರು ನಮ್ಮ ನಾಯಕ, ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಭಾರತದ ಸಂಸ್ಕೃತಿಯಲ್ಲಿ ಇನ್ನೂ ಚಟುವಟಿಕೆಯಿಂದ ಇರುವ ನಾಯಕರ ಉತ್ತರಾಧಿಕಾರಿ ಹುಡುವುದು ಸಮಂಜಸವಲ್ಲ’ ಎಂದರು. 

ರಾವುತ್ ಹೇಳಿದ್ದೇನು: ಇದಕ್ಕೂ ಮುನ್ನ ಮಾತನಾಡಿದ್ದ ಶಿವಸೇನಾ (ಯುಬಿಟಿ ಬಣ) ಸಂಸದ ಸಂಜಯ್ ರಾವುತ್, ‘ದೇಶದಲ್ಲಿ ರಾಜಕೀಯ ನಾಯಕತ್ವ ಬದಲಿಸುವ ಬಯಕೆಯನ್ನು ಆರ್‌ಎಸ್ಎಸ್ ಹೊಂದಿದೆ. ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಅರ್ಜಿಯನ್ನು ಬರೆಯಲು ಮೋದಿ ಅವರು ಬಹುಶಃ ಆರ್‌ಎಸ್ಎಸ್ ಕಚೇರಿಗೆ ಹೋಗಿರಬಹುದು’ ಎಂದಿದ್ದರು. ಮೋದಿ ಅವರು ಸೆಪ್ಟೆಂಬರ್‌ನಲ್ಲಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬಿಜೆಪಿಯಲ್ಲಿ ಈ ಹಿಂದೆ 75 ವರ್ಷ ದಾಟಿದ ಕೆಲವು ನಾಯಕರು ರಾಜಕೀಯದಿಂದ ನಿವೃತ್ತಿಯಾಗಿದ್ದನ್ನು  ಉಲ್ಲೇಖಿಸಿ ರಾವುತ್ ಈ ಹೇಳಿಕೆ ನೀಡಿದ್ದರು. 

ಜೊತೆಗೆ, ಮೋದಿ ಅವರ ಉತ್ತರಾಧಿಕಾರಿಯಾಗಿ ಮಹಾರಾಷ್ಟ್ರ ಮೂಲದವರೇ ಆಯ್ಕೆಯಾಗಲಿದ್ದಾರೆ ಎಂದಿದ್ದರು.  

ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಸ್ಎಸ್ ಮುಖಂಡ ಭಯ್ಯಾಜಿ ಜೋಶಿ, ‘ಇಂಥ ಯಾವುದೇ ಮಾಹಿತಿ ನನಗಿಲ್ಲ. ಆರ್‌ಎಸ್ಎಸ್ ಕೇಂದ್ರ ಕಚೇರಿಗೆ ಭಾನುವಾರ ಮೋದಿ ಬಂದಿದ್ದರು. ಎಲ್ಲ ಕಾರ್ಯಕ್ರಮಗಳು ಚೆನ್ನಾಗಿ ನಡೆದವು. ನಾವೆಲ್ಲರೂ ಖುಷಿಪಟ್ಟೆವು. ಸೇವೆ ಸಲ್ಲಿಸಬೇಕು ಎಂಬ ಅವರ ಆಸಕ್ತಿ ಕೋವಿಡ್ ಸಂದರ್ಭದಲ್ಲಿ ರುಜುವಾತಾಗಿದೆ’ ಎಂದರು.

ದೇಶದಲ್ಲಿ ರಾಜಕೀಯ ನಾಯಕತ್ವ ಬದಲಿಸುವ ಬಯಕೆ ಆರ್‌ಎಸ್ಎಸ್ ಹೊಂದಿದೆ. ಸೆಪ್ಟೆಂಬರ್‌ನಲ್ಲಿ ಮೋದಿ ರಾಜೀನಾಮೆ ಸಲ್ಲಿಸಬಹುದು
– ಸಂಜಯ್ ರಾವುತ್, ಮುಖಂಡ ಶಿವಸೇನಾ (ಉದ್ಧವ್ ಬಣ)
ನಮ್ಮ ಸಂಸ್ಕೃತಿಯಲ್ಲಿ ಅಪ್ಪ ಬದುಕಿದ್ದಾಗ ಉತ್ತರಾಧಿಕಾರಿ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಅದು ಮೊಘಲರ ಸಂಸ್ಕೃತಿಯಲ್ಲಿದೆ.
–ದೇವೇಂದ್ರ ಫಡಣವೀಸ್, ಮುಖ್ಯಮಂತ್ರಿ ಮಹಾರಾಷ್ಟ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.