ADVERTISEMENT

ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿಲ್ಲ: ಸಂಸತ್ತಿಗೆ ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 17:48 IST
Last Updated 20 ಜುಲೈ 2021, 17:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌ –19ರ ಎರಡನೇ ಅಲೆಯ ಸಂದರ್ಭದಲ್ಲಿ, ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿಯಾಗಿಲ್ಲ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್‌ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಕೋವಿಡ್‌ ರೋಗಿಗಳು ಆಸ್ಪತ್ರೆಯಲ್ಲಿ, ರಸ್ತೆಯಲ್ಲಿ ಮೃತಪಟ್ಟಿದ್ದುಆಮ್ಲಜನಕ ಕೊರತೆಯಿಂದಲೇ ಅಲ್ಲವೇ ಎಂಬ, ಕಾಂಗ್ರೆಸ್‌ ಸದಸ್ಯ ಕೆ.ಸಿ. ವೇಣುಗೋಪಾಲ್‌ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದ್ದಾರೆ. ‘ಆರೋಗ್ಯ ವಿಷಯವು ಆಯಾ ರಾಜ್ಯಗಳಿಗೇ ಸಂಬಂಧಿಸಿದ್ದಾಗಿದ್ದು, ಕೋವಿಡ್‌ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯ ವರದಿಯನ್ನು ನಿಯಮಿತವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಆದರೆ, ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದ ಬಗ್ಗೆ ರಾಜ್ಯಗಳಿಂದಾಗಲೀ, ಕೇಂದ್ರಾಡಳಿತ ಪ್ರದೇಶಗಳಿಂದಾಗಲೀ ವರದಿ ಬಂದಿಲ್ಲ’ ಎಂದು ಸಚಿವೆ ಹೇಳಿದ್ದಾರೆ.

ಆ ಸಂದರ್ಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹಿಂದೆಂದಿಗಿಂತಲೂ ಹೆಚ್ಚು ಇತ್ತು. ಮೊದಲ ಅಲೆಯ ಸಂದರ್ಭದಲ್ಲಿ ನಿತ್ಯ 3,095 ಟನ್‌ನಷ್ಟು ಇದ್ದ ಬೇಡಿಕೆ ಎರಡನೇ ಅಲೆಯಲ್ಲಿ 9,000 ಟನ್‌ಗಳಿಗೆ ಏರಿತು ಎಂದು ತಿಳಿಸಿದರು.

ADVERTISEMENT

ಆಮ್ಲಜನಕದ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಸಚಿವರು ಸದನವನ್ನು ತಪ್ಪು ದಾರಿಗೆಳೆಯುತ್ತಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ವೇಣುಗೋಪಾಲ್‌ ಹೇಳಿದರು.

‘ಆಮ್ಲಜನಕ ಕೊರತೆಯಿಂದ, ‘ಯಾರೂ ಮೃತಪಟ್ಟಿಲ್ಲ’ ಎಂದು ಸಚಿವರು ಹೇಳಿಲ್ಲ. ಆಮ್ಲಜನಕ ಕೊರತೆಯಿಂದ ಮೃತಪಟ್ಟ ಬಗ್ಗೆ ‘ವರದಿಗಳು ಬಂದಿಲ್ಲ’ ಎಂದಷ್ಟೇ ಹೇಳಿದ್ದಾರೆ’ ಎಂದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ‘ ಕುರುಡು ಹಾಗೂ ಕಿವುಡು ಸರ್ಕಾರಕ್ಕೆ ಸತ್ಯವನ್ನು ನೋಡಲು ಹಾಗೂ ಕೇಳಲು ಎರಡೂ ಆಗದು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.