ನವದೆಹಲಿ: ರೈಲ್ವೆ ಸೇವೆಗಳನ್ನು ಕಡಿತಗೊಳಿಸುವ ಅಥವಾ ನಿಲ್ಲಿಸುವ ಯಾವುದೇ ಯೋಜನೆ ಇಲ್ಲ. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವಾಗ ಪ್ರಯಾಣ ದಟ್ಟಣೆ ತಗ್ಗಿಸಲು ಪ್ರಯಾಣಿಕರಿಂದ ಬೇಡಿಕೆ ಬಂದರೆ ಮತ್ತಷ್ಟು ರೈಲುಗಳ ಸೇವೆಯನ್ನು ಒದಗಿಸಲಾಗುವುದು ಎಂದು ರೈಲ್ವೆ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ.
ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ಮರಳಲು ಸಾಕಷ್ಟು ಸಂಖ್ಯೆಯಲ್ಲಿ ರೈಲುಗಳ ಸೇವೆ ದೊರೆಯುತ್ತಿಲ್ಲ ಎನ್ನುವ ಮಾಧ್ಯಮ ವರದಿಗಳನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ, ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಜಾನ್ ಥಾಮಸ್, ಉತ್ತರ ಮತ್ತು ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಜನಸಂಪರ್ಕ ಅಧಿಕಾರಿಗಳು (ಸಿಪಿಆರ್‌ಗಳು) ಸೇರಿ ಹಲವು ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ರೈಲುಗಳಿಗೆ ಯಾವುದೇ ಕೊರತೆಯಿಲ್ಲ. ಪ್ರಯಾಣಕರ ಅಗತ್ಯಕ್ಕೆ ತಕ್ಕಷ್ಟು ರೈಲುಗಳ ಸೇವೆಯನ್ನು ಒದಗಿಸಲು ರೈಲ್ವೆ ಸಿದ್ಧವಾಗಿದೆ. ಈ ಬಗ್ಗೆ ತುರ್ತು ಸುತ್ತೋಲೆಯನ್ನು ಹೊರಡಿಸಲಿದ್ದೇವೆ.ಬೇಸಿಗೆಯಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ದಟ್ಟಣೆ ಇರುತ್ತದೆ. ಇದನ್ನು ಪರಿಹರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಶರ್ಮಾ ತಿಳಿಸಿದ್ದಾರೆ.
ರೈಲುಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಕೋವಿಡ್ 19 ನೆಗೆಟಿವ್ ವರದಿ ಹೊಂದಿರಬೇಕೆಂಬ ನಿಯಮ ಕಡ್ಡಾಯಗೊಳಿಸಿರುವುದನ್ನು ಶರ್ಮಾ ಇದೇ ಸಂದರ್ಭದಲ್ಲಿ ಅಲ್ಲಗಳೆದರು.
ಕೋವಿಡ್ 19 ಪ್ರಕರಣಗಳ ಏರಿಕೆ ಗಮನದಲ್ಲಿಟ್ಟುಕೊಂಡು ರೈಲುಗಳ ಸಂಚಾರ ನಿಲ್ಲಿಸಲು ಅಥವಾ ಮೊಟಕುಗೊಳಿಸಲು ರೈಲ್ವೆಗೆ ಮಹಾರಾಷ್ಟ್ರದಿಂದ ಇನ್ನೂ ಯಾವುದೇ ಸೂಚನೆ, ಕೋರಿಕೆ ಬಂದಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.