ADVERTISEMENT

2011ರ ಜಾತಿ ಜನಗಣತಿ ದತ್ತಾಂಶ ಬಿಡುಗಡೆ ಸದ್ಯಕ್ಕಿಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 10 ಮಾರ್ಚ್ 2021, 10:12 IST
Last Updated 10 ಮಾರ್ಚ್ 2021, 10:12 IST
ನಿತ್ಯಾನಂದ್‌ ರೈ
ನಿತ್ಯಾನಂದ್‌ ರೈ   

ನವದೆಹಲಿ: ದೇಶದಾದ್ಯಂತ 2011ರಲ್ಲಿ ನಡೆಸಿದ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಸರ್ಕಾರ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂಆರ್‌ಡಿ), ಅಂದಿನ ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ (ಎಚ್‌ಯುಪಿಎ) ಜಂಟಿಯಾಗಿ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 2011ರಲ್ಲಿ ಸಾಮಾಜಿಕ–ಆರ್ಥಿಕ ಮತ್ತು ಜಾತಿ ಜನಗಣತಿಯನ್ನು (ಎಸ್‌ಇಸಿಸಿ) ನಡೆಸಿದ್ದವು ಎಂದು ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ‌ ರೈ ತಿಳಿಸಿದ್ದಾರೆ.

ಜಾತಿ ದತ್ತಾಂಶಗಳನ್ನು ಹೊರತುಪಡಿಸಿ ಎಸ್‌ಇಸಿಸಿ–2011ರ ದತ್ತಾಂಶವನ್ನು ಎಂಆರ್‌ಡಿ ಮತ್ತು ಎಚ್‌ಯುಪಿಎ ಅಂತಿಮಗೊಳಿಸಿ ಪ್ರಕಟಿಸಿವೆ ಎಂದು ರೈ ಹೇಳಿದ್ದಾರೆ.

ADVERTISEMENT

ದತ್ತಾಂಶಗಳ ವಿಂಗಡಣೆ ಮತ್ತು ವರ್ಗೀಕರಣಕ್ಕಾಗಿ ಕಚ್ಚಾ ಜಾತಿ ದತ್ತಾಂಶವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ (ಎಂಎಸ್‌ಜೆಇ) ಕಳುಹಿಸಲಾಗಿದೆ. ಈ ಹಂತದಲ್ಲಿ ಜಾತಿ ದತ್ತಾಂಶವನ್ನು ಬಿಡುಗಡೆ ಮಾಡುವ ಪ್ರಸ್ತಾವವಿಲ್ಲ ಎಂದು ಎಂಎಸ್‌ಜೆಇ ಮಾಹಿತಿ ನೀಡಿದೆ ಎಂದು ಸಚಿವ ರೈ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2021ರ ಜನಗಣತಿ ನಡೆಸುವ ಸರ್ಕಾರದ ಉದ್ದೇಶವನ್ನು 2019ರ ಮಾರ್ಚ್‌ 28ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಜನಗಣತಿ ವೇಳಾಪಟ್ಟಿಯನ್ನು ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

1950ರ ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ ಮತ್ತು 1950ರ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶದ ಪ್ರಕಾರ ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಸೂಚಿಸಲಾಗಿರುವ ಜಾತಿ ಮತ್ತು ಪಂಗಡದವರನ್ನು ಜಾತಿಗಣತಿಯಲ್ಲಿ ಎಣಿಕೆ ಮಾಡಲಾಗಿದೆ.

ಸ್ವಾತಂತ್ರ್ಯ ನಂತರ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಜಾತಿವಾರು ಜನಸಂಖ್ಯೆಯನ್ನು ನೀತಿ ವಿಷಯವಾಗಿ ಲೆಕ್ಕಿಸದಿರಲು ನಿರ್ಧರಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.