ADVERTISEMENT

ಪಳೆಯುಳಿಕೆ ಇಂಧನ ಬಳಕೆಗೆ ಕಡಿವಾಣ: ಶೃಂಗಸಭೆ ಮೌನ

ಪಿಟಿಐ
Published 18 ನವೆಂಬರ್ 2022, 12:45 IST
Last Updated 18 ನವೆಂಬರ್ 2022, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರತಿಕೂಲ ವಾತಾವರಣದಿಂದಾದ ನಷ್ಟ, ಹಾನಿ ಭರಿಸಲು ಆರ್ಥಿಕ ನೆರವು ನೀಡಬೇಕು ಎಂಬ ಬೇಡಿಕೆ ಕುರಿತಂತೆ ಈಜಿಪ್ಟ್‌ನಲ್ಲಿ ನಡೆದ ವಿಶ್ವಸಂಸ್ಥೆಯ ವಾತಾವರಣ ಶೃಂಗಸಭೆ ಒಪ್ಪಂದದ ಪ್ರಥಮ ಕರಡು ಪ್ರತಿಯಲ್ಲಿ ಯಾವುದೇ ಉಲ್ಲೇಖವಿಲ್ಲ.

ಅಲ್ಲದೆ, ಜಾಗತಿಕ ತಾಪಮಾನ ಪ್ರಮಾಣ ತಗ್ಗಿಸಲು ಹಂತಹಂತವಾಗಿ ಎಲ್ಲ ಪ್ರಕಾರದ ಪಳೆಯುಳಿಕೆ ಇಂಧನದ ಬಳಕೆ ಕೈಬಿಡಬೇಕು ಎಂಬ ಭಾರತದ ಬೇಡಿಕೆಯನ್ನೂ ಕೈಬಿಡಲಾಗಿದೆ. ಶೃಂಗಸಭೆಯ ಪ್ರಥಮ ಹಾಗೂ ಔಪಚಾರಿಕ ಕರಡು ಪ್ರತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಜಾಗತಿಕ ತಾಪಮಾನ ಪ್ರಮಾಣವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೇ ಸೀಮಿತಗೊಳಿಸುವಕ್ಕೆ ಪೂರಕವಾಗಿ ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತ್ವರಿತ ಹಾಗೂ ವ್ಯಾಪಕವಾಗಿ ತಡೆಯುವುದು ಅಗತ್ಯ ಎಂದು ಕರಡು ಪ್ರತಿಯಲ್ಲಿ ಪ್ರತಿಪಾದಿಸಲಾಗಿದೆ.

ADVERTISEMENT

ಪ್ರತಿಕೂಲ ವಾತಾವರಣದಿಂದಾಗುವ ನಷ್ಟ, ಹಾನಿ ಭರಿಸುವುದು ಅಥವಾ ಹೊಸ ನಿಧಿ ಸ್ಥಾಪಿಸಬೇಕು. ಉದಾಹರಣೆಗೆ ಪ್ರವಾಹದ ವೇಳೆ ಸಂತ್ರಸ್ಥರ ಸ್ಥಳಾಂತರಕ್ಕೆ ನೆರವು ನೀಡಬೇಕು ಎಂಬುದು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ದೀರ್ಘ ಕಾಲದ ಬೇಡಿಕೆಯಾಗಿದೆ. ಆದರೆ, ಈ ಕುರಿತು ಚರ್ಚೆ ಆಗದಂತೆ ಮೊದಲಿನಿಂದಲೂ ಶ್ರೀಮಂತ, ಅಭಿವೃದ್ಧಿ ರಾಷ್ಟ್ರಗಳು ನೋಡಿಕೊಳ್ಳುತ್ತಿವೆ.

ಆದರೆ, ಹಂತ ಹಂತವಾಗಿ ಪಳೆಯುಳಿಕೆ ಇಂಧನದ ಬಳಕೆ ಕೈಬಿಡಬೇಕು ಎಂಬ ಬೇಡಿಕೆ ಕೈಬಿಟ್ಟಿರುವುದು ಆಶ್ಚರ್ಯಕರ ಎಂದು ಪರಿಣತರು ಹೇಳಿದ್ದಾರೆ. ಅಮೆರಿಕ, ಯೂರೋಪಿಯನ್‌ ಒಕ್ಕೂಟ ಒಳಗೊಂಡು ವಿವಿಧ ಅಭಿವೃದ್ಧಿಶೀಲ, ಅಭಿವೃದ್ಧಿ ರಾಷ್ಟ್ರಗಳು ಇದನ್ನು ಬೆಂಬಲಿಸಿದ್ದವು.

ಪ್ರತಿಕೂಲ ವಾತಾವರಣದಿಂದಾಗುವ ನಷ್ಟ ಭರಿಸುವುದು, ಆರ್ಥಿಕ ನೆರವು ನೀಡುವ ಕುರಿತು ವಿವಿಧ ರಾಷ್ಟ್ರಗಳ ನಡುವೆ ಸಹಮತ ಮೂಡಬೇಕಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.