ADVERTISEMENT

ನ್ಯಾಯಾಧೀಶರ ನೇಮಕಾತಿ ವೇಳೆ ಮೀಸಲಾತಿಗೆ ಅವಕಾಶವಿಲ್ಲ: ಕಿರಣ್‌ ರಿಜಿಜು

ಪಿಟಿಐ
Published 9 ಫೆಬ್ರುವರಿ 2023, 9:57 IST
Last Updated 9 ಫೆಬ್ರುವರಿ 2023, 9:57 IST
   

ನವದೆಹಲಿ: ದೇಶದಲ್ಲಿನ ಈಗಿರುವ ನೀತಿಯು ನ್ಯಾಯಾಂಗದಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲ. ಆದರೆ ನ್ಯಾಯಾಧೀಶರು, ವಿಶೇಷವಾಗಿ ಕೊಲಿಜಿಯಂ ಸದಸ್ಯರು, ನ್ಯಾಯಾಧೀಶರ ನೇಮಕಾತಿಗಾಗಿ ಶಿಫಾರಸು ಮಾಡುವಾಗ ಈ ವ್ಯವಸ್ಥೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ಪಡೆಯದ ಸಮುದಾಯ, ವರ್ಗಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಡಿಎಂಕೆ ನಾಯಕ ತಿರುಚಿ ಶಿವ ‘ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಪರಿಚಯಿಸುವ ಸಾಧ್ಯತೆಯನ್ನು ಸರ್ಕಾರ ಪರಿಗಣಿಸುತ್ತದೆಯೇ’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು, ‘ಅಸ್ತಿತ್ವದಲ್ಲಿರುವ ನೀತಿ ಮತ್ತು ನಿಬಂಧನೆಗಳ ಪ್ರಕಾರ, ಭಾರತೀಯ ನ್ಯಾಯಾಂಗದಲ್ಲಿ ಮೀಸಲಾತಿಗೆ ಅವಕಾಶವಿಲ್ಲ’ ಎಂದರು.

ADVERTISEMENT

‘ಆದಾಗ್ಯೂ, ಹಿಂದುಳಿದ ಸಮುದಾಯಗಳು, ಮಹಿಳೆಯರು ಮತ್ತು ಭಾರತೀಯ ನ್ಯಾಯಾಂಗದಲ್ಲಿ ಸಮರ್ಪಕ ಪ್ರಾತಿನಿಧ್ಯ ಹೊಂದಿರದ ಇತರ ವರ್ಗಗಳ ಸದಸ್ಯರನ್ನು ಶಿಫಾರಸು ಮಾಡುವಾಗಲೇ ಗಮನದಲ್ಲಿಟ್ಟುಕೊಳ್ಳುವಂತೆ ಈಗಾಗಲೇ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರಿಗೆ, ವಿಶೇಷವಾಗಿ ನೇಮಕಾತಿ ನಡೆಸುವ ಕೊಲಿಜಿಯಂ ಸದಸ್ಯರಿಗೆ ನೆನಪಿಸಿದ್ದೇನೆ’ ಎಂದು ರಿಜಿಜು ತಿಳಿಸಿದರು.

ಗುಜರಾತ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಕಾನೂನು ಮತ್ತು ನ್ಯಾಯಾಂಗ ರಾಜ್ಯ ಖಾತೆ ಸಚಿವ ಎಸ್‌ಪಿ ಸಿಂಗ್ ಬಘೇಲ್, ರಾಜ್ಯದಲ್ಲಿ ಇದುವರೆಗೆ ಸುಮಾರು 14,47,459 ಪ್ರಕರಣಗಳು ಬಾಕಿ ಉಳಿದಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.