ADVERTISEMENT

ರಫೇಲ್ ಒಪ್ಪಂದ: ಕೇಂದ್ರಕ್ಕೆ ನಿರಾಳತೆ ಒದಗಿಸಿದ ‘ಸುಪ್ರೀಂ’ ತೀರ್ಪು

ತನಿಖೆ ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳ ವಜಾ

ಪಿಟಿಐ
Published 14 ಡಿಸೆಂಬರ್ 2018, 7:31 IST
Last Updated 14 ಡಿಸೆಂಬರ್ 2018, 7:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸುವಂತೆ ಸಿಬಿಐಗೆ ಸೂಚಿಸಬೇಕು ಎಂದು ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯದ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್)ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿ ಈ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂದಿಸಿದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಒಪ್ಪಂದಕ್ಕೆ ಸಂಬಂಧಿಸಿ ಕೈಗೊಂಡ ನಿರ್ಧಾರದ ಪ್ರಕ್ರಿಯೆಯ ಬಗ್ಗೆ ಅನುಮಾನವಿಲ್ಲ ಎಂದು ಹೇಳಿದೆ.

ಒಪ್ಪಂದದ ದೇಶಿ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸರ್ಕಾರ ಪಕ್ಷಪಾತ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ.ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕಾರಣಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಬೆಲೆಯ ಪರಾಮರ್ಶೆ ನ್ಯಾಯಾಲಯದ ಕೆಲಸವಲ್ಲ

ಒಪ್ಪಂದಕ್ಕೆ ಸಂಬಂಧಿಸಿದ ಬೆಲೆಯ ಪರಾಮರ್ಶೆ ನ್ಯಾಯಾಲಯದ ಕೆಲಸವಲ್ಲ. ಖರೀದಿ, ಬೆಲೆ ಪರಾಮರ್ಶೆ ಮತ್ತು ದೇಶಿ ಪಾಲುದಾರನ ಆಯ್ಕೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಅಗತ್ಯ ಕಾಣಿಸುತ್ತಿಲ್ಲ. ಒಪ್ಪಂದದಲ್ಲಿ ಭಾಗಿಯಾಗಿರುವ ಎರಡೂ ಕಡೆಯವರು ಖರೀದಿ ಪ್ರಕ್ರಿಯೆಯ ಎಲ್ಲ ವಿಷಯಗಳನ್ನೂ ಸ್ಪಷ್ಟಪಡಿಸಿದ್ದಾರೆ ಎಂದೂ ನ್ಯಾಯಪೀಠ ಹೇಳಿದೆ.

4 ಮತ್ತು 5ನೇ ತಲೆಮಾರಿನ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆಗೆ ನಿಯೋಜನೆ ಮಾಡಬೇಕಾದ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT