ADVERTISEMENT

ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿಗೆ ಯಾವುದೇ ಅಡಚಣೆ ಮಾಡುವುದಿಲ್ಲ: ಅಮೆರಿಕ

ರಾಯಿಟರ್ಸ್
Published 31 ಮಾರ್ಚ್ 2022, 16:00 IST
Last Updated 31 ಮಾರ್ಚ್ 2022, 16:00 IST
ಕಚ್ಚಾತೈಲ ಸಂಸ್ಕರಣೆ: ಐಸ್ಟಾಕ್ ಚಿತ್ರ
ಕಚ್ಚಾತೈಲ ಸಂಸ್ಕರಣೆ: ಐಸ್ಟಾಕ್ ಚಿತ್ರ   

ನವದೆಹಲಿ: ರಷ್ಯಾದಿಂದ ಭಾರತವು ಇಂಧನ ಆಮದು ಮಾಡಿಕೊಳ್ಳುವುದಕ್ಕೆ ಯಾವುದೇ ಅಡಚನೆ ಮಾಡುವುದಿಲ್ಲ ಎಂದು ಅಮೆರಿಕ ಹೇಳಿದೆ. ಆದರೆ, ಖರೀದಿಯ ವೇಗವರ್ಧನೆಯನ್ನು ನೋಡಲು ಬಯಸುವುದಿಲ್ಲ ಎಂದು ದೆಹಲಿಗೆ ಆಗಮಿಸಿರುವ ಅಮೆರಿಕದ ಅಧಿಕಾರಿ ತಿಳಿಸಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ತೈಲ ಆಮದಿನ ಮೇಲೆ ನಿರ್ಬಂಧ ಹೇರಿದ್ದರಿಂದ ರಷ್ಯಾವು ಭಾರತಕ್ಕೆ ಅಧಿಕ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡುವ ಆಫರ್ ನೀಡಿತ್ತು. ಹಾಗಾಗಿ, ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭವಾದ ಬಳಿಕ ಭಾರತವು ರಷ್ಯಾದಿಂದ 13 ಮಿಲಿಯನ್ ಬ್ಯಾರಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷಪೂರ್ತಿ ಭಾರತವು 16 ಮಿಲಿಯನ್ ಬ್ಯಾರಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತ್ತು.

'ಅಮೆರಿಕವು ಸ್ನೇಹ ಹೊಂದಿರುವ ದೇಶಗಳಿಗೆ ಕೆಂಪು ಗೆರೆಗಳನ್ನು ಹಾಕುವುದಿಲ್ಲ’ಎಂದು ಅಂತರರಾಷ್ಟ್ರೀಯ ಆರ್ಥಿಕತೆಗೆ ಸಂಬಂಧಿಸಿದ ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೂ, ಯುರೋಪ್ ಮತ್ತು ಏಷ್ಯಾದಲ್ಲಿ ನಮ್ಮ ಪಾಲುದಾರ ದೇಶಗಳು ಅವಿಶ್ವಾಸಾರ್ಹ ಇಂಧನ ಪೂರೈಕೆದಾರರ ಮೇಲೆ ಅವಲಂಬನೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.

ಎರಡು ದಿನಗಳ ಪ್ರವಾಸಕ್ಕಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ರಷ್ಯಾ ದೀರ್ಘಕಾಲದಿಂದ ಭಾರತದ ರಕ್ಷಣಾ ಸಾಧನಗಳ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. ಭಾರತವು ಚೀನಾದಿಂದ ಗಡಿಯಲ್ಲಿ ಪ್ರಕ್ಷುಬ್ದತೆ ಎದುರಿಸುತ್ತಿರುವುದರಿಂದ ರಷ್ಯಾದ ಸರಬರಾಜು ಭಾರತಕ್ಕೆ ಅತ್ಯಗತ್ಯ ಎಂದು ರಕ್ಷಣಾ ವಿಶ್ಲೇಷಕರು ಹೇಳುತ್ತಾರೆ.

ಭಾರತಕ್ಕೆ ಇಂಧನ ಮತ್ತು ರಕ್ಷಣಾ ಸರಬರಾಜುಗಳನ್ನು ಮಾಡುವ ಮೂಲಕ ನೆರವು ನೀಡಲು ಅಮೆರಿಕ ಸಿದ್ಧವಿದೆ ಎಂದು ಸಿಂಗ್ ಹೇಳಿದರು.

'ರಷ್ಯಾದಿಂದ ಭಾರತದ ಆಮದುಗಳ ತ್ವರಿತ ವೇಗವರ್ಧನೆಯನ್ನು ನೋಡಲು ಇಚ್ಛಿಸುವುದಿಲ್ಲ. ಏಕೆಂದರೆ ಆ ಆಮದು ಅಂತರರಾಷ್ಟ್ರೀಯ ನಿಷೇಧಕ್ಕೆ ಒಳಪಟ್ಟಿರುವ ದೇಶಕ್ಕೆ ಸಂಬಂಧಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.