ಪ್ರಧಾನಿ ಮೋದಿ
ಗುನಾ: ನಿತೀಶ್ ಕುಮಾರ್ ಅವರು ಬಿಹಾರ ವಿಧಾನಸಭೆಯಲ್ಲಿ ಮಹಿಳೆಯರ ಬಗ್ಗೆ ಆಡಿದ ‘ನಿಂದನಾತ್ಮಕ’ ಮಾತುಗಳ ಬಗ್ಗೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಮಾತೇ ಆಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹರಿಹಾಯ್ದಿದ್ದಾರೆ.
ಮಹಿಳೆಯರ ಗೌರವಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ತಾವು ಮಾಡುವುದಾಗಿ ಮೋದಿ ಅವರು ಹೇಳಿದ್ದಾರೆ. ‘ಕೇಂದ್ರದಲ್ಲಿ ಇರುವ ಸರ್ಕಾರವನ್ನು ಉರುಳಿಸಲು ಬಗೆಬಗೆಯ ಆಟ ಆಡುತ್ತಿರುವ ಇಂಡಿಯಾ ಮೈತ್ರಿಕೂಟದ ದೊಡ್ಡ ನಾಯಕರೊಬ್ಬರು ಭಾಷೆಯೊಂದನ್ನು ಬಳಸಿದರು, ಇಂತಹ ಭಾಷೆಯನ್ನು ತಾಯಂದಿರುವ ಹಾಗೂ ಸಹೋದರಿಯರು ಇರುವ ವಿಧಾನಸಭೆಯಲ್ಲಿ ಯಾರೂ ಆಲೋಚಿಸಲೂ ಸಾಧ್ಯವಿಲ್ಲ... ಭಾಷೆ ಬಳಸಿದ ಅವರಿಗೆ ನಾಚಿಕೆಯೂ ಆಗಲಿಲ್ಲ’ ಎಂದು ಮೋದಿ ಅವರು ನಿತೀಶ್ ಕುಮಾರ್ ಅವರ ಹೆಸರು ಉಲ್ಲೇಖಿಸದೆ ಹೇಳಿದರು.
‘ಇಂತಹ ದೃಷ್ಟಿಕೋನ ಹೊಂದಿರುವವರು, ಮಹಿಳೆಯರ ಗೌರವವನ್ನು ಉಳಿಸಲು ಹೇಗೆ ಸಾಧ್ಯ? ಅವರು ಇನ್ನೂ ಎಷ್ಟು ಕೆಳಮಟ್ಟಕ್ಕೆ ಇಳಿಯಲಿದ್ದಾರೆ? ದೇಶಕ್ಕೆ ಎಂತಹ ದುರದೃಷ್ಟದ ಸ್ಥಿತಿ ಬಂತು. ಮಹಿಳೆಯರ ಗೌರವವನ್ನು ಕಾಯಲು ನಾನು ನನ್ನಿಂದ ಏನೆಲ್ಲ ಸಾಧ್ಯವೋ ಅವನ್ನೆಲ್ಲ ಮಾಡುತ್ತೇನೆ’ ಎಂದು ಮೋದಿ ಅವರು ಮಧ್ಯಪ್ರದೇಶದ ಚುನಾವಣಾ ರ್‍ಯಾಲಿಯೊಂದರಲ್ಲಿ ಹೇಳಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ವಿಸ್ತರಿಸುವ ಘೋಷಣೆಯನ್ನು ಚುನಾವಣಾ ರ್‍ಯಾಲಿಯೊಂದರಲ್ಲಿ ಮಾಡಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿದೆ ಎಂದು ಮೋದಿ ಅವರು ತಿಳಿಸಿದರು. ‘80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಯೋಜನೆಯ ಮುಂದುವರಿಕೆಗೆ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ. ಅವರು (ಕಾಂಗ್ರೆಸ್) ನನ್ನ ವಿರುದ್ಧ ಜಗತ್ತಿನ ಯಾವ ನ್ಯಾಯಾಲಯಕ್ಕೆ ಬೇಕಿದ್ದರೂ ಹೋಗಲಿ’ ಎಂದು ಸವಾಲೆಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.