ADVERTISEMENT

ಅಂತಿಮ ತೀರ್ಮಾನದವರೆಗೆ ಕೊಳೆಗೇರಿ ತೆರವು ಇಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 14 ಸೆಪ್ಟೆಂಬರ್ 2020, 11:30 IST
Last Updated 14 ಸೆಪ್ಟೆಂಬರ್ 2020, 11:30 IST
ದೆಹಲಿಯಲ್ಲಿ ಸರಾಯ್ ರೊಹಿಲಾ ರೈಲ್ವೆ ಹಳಿಗೆ ಹೊಂದಿಕೊಂಡಂತೆ ಇರುವ ಕೊಳಗೇರಿಗಳು
ದೆಹಲಿಯಲ್ಲಿ ಸರಾಯ್ ರೊಹಿಲಾ ರೈಲ್ವೆ ಹಳಿಗೆ ಹೊಂದಿಕೊಂಡಂತೆ ಇರುವ ಕೊಳಗೇರಿಗಳು   

ನವದೆಹಲಿ: ದೆಹಲಿಯಲ್ಲಿ ರೈಲ್ವೆ ಹಳಿಗೆ ಹೊಂದಿಕೊಂಡಂತೆ 140 ಕಿ.ಮೀ ಅಂತರದಲ್ಲಿ ಇರುವ ಕೊಳೆಗೇರಿಗಳನ್ನುಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ತೆರವು ಮಾಡುವುದಿಲ್ಲ ಎಂದು ಕೇಂದ್ರ ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಸೋಮವಾರಈ ಮಾಹಿತಿ ನೀಡಿದೆ. ಈ ಮುನ್ನಆ.31ರಂದು ಕೋರ್ಟ್ ಸುಮಾರು 48,000 ಕೊಳೆಗೇರಿಗಳನ್ನು ತೆರವುಗೊಳಿಸಬೇಕು ಎಂದು ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿತ್ತು.

ರೈಲ್ವೆ ಇಲಾಖೆ, ದೆಹಲಿ ಸರ್ಕಾರ ಮತ್ತು ನಗರಾಭಿವೃದ್ಧಿ ಸಚಿವಾಲಯದ ಜೊತೆಗೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಈ ಹೇಳಿಕೆ ದಾಖಲಿಸಿಕೊಂಡ ಪೀಠ ನಾಲ್ಕು ವಾರಗಳ ಕಾಲಾವಕಾಶ ನೀಡಿತು. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ಬಾಲಸುಬ್ರಹ್ಮಣಿಯನ್ ಪೀಠದ ಇತರ ಸದಸ್ಯರು.

ಈ ಕುರಿತು ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ನಾಯಕ ಅಜಯ್ ಮಕೆನ್ ಅವರು, ಕೊಳೆಗೇರಿಗಳ ತೆರವಿಗೆ ಮುನ್ನ ನಿವಾಸಿಗಳಿಗೆ ಅಗತ್ಯ ಪುನರ್ವಸತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಮಕೇನ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ‘ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಬೇಕು’ ಎಂದು ಕೋರಿದರು.

ಆದರೆ, ನ್ಯಾಯಪೀಠ ‘ನಾವು ಯಥಾಸ್ಥಿತಿಗೆ ನಿರ್ದೇಶನ ನೀಡುತ್ತಿಲ್ಲ. ಸಾಲಿಸಿಟರ್ ಜನರಲ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಲಾಗಿದೆ’ ಎಂದು ತಿಳಿಸಿದರು.

ಸಿಂಘ್ವಿ ಅವರು ಇದೇ ಸಂದರ್ಭದಲ್ಲಿ ಸೆ. 11 ಮತ್ತು ಇಂದು ಕೆಲ ಕೊಳೆಗೇರಿಗಳನ್ನು ತೆರವು ಮಾಡಿಸಲಾಗಿದೆ ಎಂದೂ ಪೀಠದ ಗಮನಕ್ಕೆ ತಂದರು. ಇದಕ್ಕೆ ಸಾಲಿಸಿಟರ್ ಜನರಲ್ ಅವರು, ‘ಮತ್ತೊಂದು ಆದೇಶಕ್ಕೆ ಅನ್ವಯಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದ ಅನುಸಾರ ಅಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.