ADVERTISEMENT

ಇಸ್ರೇಲ್‌ ರಾಯಭಾರ ಕಚೇರಿ ಬಳಿಯ ಸ್ಫೋಟಕ್ಕೆ ಸಿಗದ ಪ್ರಬಲ ಸಾಕ್ಷ್ಯ

ಕೆಲಸ ಮಾಡದ ಸಿಸಿಟಿವಿಗಳು?; ಕಚೇರಿ ಬಳಿ ಅನುಮಾನಾಸ್ಪದ ವಾಹನ ಓಡಾಟ

ಪಿಟಿಐ
Published 30 ಜನವರಿ 2021, 16:49 IST
Last Updated 30 ಜನವರಿ 2021, 16:49 IST
ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ನಡೆದ ಸ್ಪೋಟದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ–ಎಎಫ್‌ಪಿ ಚಿತ್ರ
ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ನಡೆದ ಸ್ಪೋಟದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ–ಎಎಫ್‌ಪಿ ಚಿತ್ರ   

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿಯ ಬಳಿ ಶುಕ್ರವಾರ ನಡೆದ ಕಡಿಮೆ ತೀವ್ರತೆಯ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಇನ್ನೂ ಗಟ್ಟಿ ಸಾಕ್ಷ್ಯಗಳು ಲಭ್ಯವಾಗಿಲ್ಲ. ಸ್ಫೋಟದ ಸ್ಥಳದ ಸಮೀಪ ವಿರುವ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಘಟನೆಯ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.

ದೆಹಲಿ ಪೊಲೀಸರ ವಿಶೇಷ ತನಿಖಾತಂಡವು ಘಟನಾ ಸ್ಥಳಕ್ಕೆ ಭೇಟಿನೀಡಿ ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಯಿತು. ಕೆಲವು ಸಿಸಿಟಿವಿ ಕ್ಯಾಮೆರಾಗ ಳಿಂದ ದೃಶ್ಯಗಳನ್ನು ಪಡೆಯುವಲ್ಲಿ ತಂಡ ಯಶಸ್ವಿಯಾಗಿದೆ. ಆದರೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳಿಂದ ಯಾವುದೇ ನಿಖರ ಪುರಾವೆಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳಿಂದ ಪಡೆಯಲಾದ ಒಂದು ದೃಶ್ಯ ತುಣುಕಿನಲ್ಲಿ ಸ್ಫೋಟಕ್ಕೆಸ್ವಲ್ಪ ಮುಂಚಿತವಾಗಿ ವಾಹನವೊಂದು ರಾಯಭಾರ ಕಚೇರಿಯ ಬಳಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನಾ ಸ್ಥಳದಿಂದ ಬಾಲ್‌ಬೇರಿಂಗ್‌ ಹಾಗೂ ಇತರ ಕೆಲವು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇಸ್ರೇಲಿ ರಾಯಭಾರ ಕಚೇರಿಗೆ ಬರೆದಿದ್ದು ಎನ್ನಲಾದ ಒಂದು ಟಿಪ್ಪಣಿಯು ಸಹ ಸ್ಫೋಟದಸ್ಥಳದಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

ವಿಚಾರಣೆ: ಘಟನೆಗೆ ಸಂಬಂಧಿಸಿದಂತೆ ಇರಾನ್ ಪ್ರಜೆಗಳೂ ಸೇರಿದಂತೆ ಕೆಲವು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಎನ್‌ಎಸ್‌ಜಿಯ ನ್ಯಾಷನಲ್ ಬಾಂಬ್ ಡಾಟಾ ಸೆಂಟರ್ (ಎನ್‌ಬಿಡಿಸಿ) ತಂಡವು ಸ್ಫೋಟದ ನಂತರದ ವಿಶ್ಲೇಷಣೆಗಾಗಿ ಸ್ಥಳಕ್ಕೆ ಭೇಟಿ ನೀಡಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯಭಾರ ಕಚೇರಿಯ ಹೊರಗಿನ ರಸ್ತೆಯಲ್ಲಿರುವ ಜಿಂದಾಲ್ ಹೌಸ್ ಬಳಿ ಹೂವಿನ ಕುಂಡವೊಂದರಲ್ಲಿ ಸ್ಫೋಟಕ ಇಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಭಯೋತ್ಪಾದಕ ಕೃತ್ಯ: ಇಸ್ರೇಲ್ ರಾಯಭಾರಿ

‘ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಪೋಟವು ಭಯೋತ್ಪಾದಕ ಕೃತ್ಯ ಎನ್ನಲು ಸಾಕಷ್ಟು ಕಾರಣಗಳಿವೆ’ ಎಂದು ಇಸ್ರೇಲ್ ಹೇಳಿದೆ. ಸ್ಫೋಟ ಸಂಭವಿಸಿದ ಒಂದು ದಿನದ ನಂತರ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಘಟನೆಯಿಂದ ಅಚ್ಚರಿಯೇನೂ ಆಗಿಲ್ಲ. ಗುಪ್ತಚರ ಮಾಹಿತಿ ಸಿಕ್ಕಿದ್ದರಿಂದ ಕಳೆದ ಕೆಲವು ವಾರಗಳಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಇಸ್ರೇಲಿ ರಾಜತಾಂತ್ರಿಕರ ಮೇಲೆ 2012ರಲ್ಲಿ ನಡೆದಿದ್ದ ದಾಳಿಗೂ, ಇಸ್ರೇಲ್ ಸಿಬ್ಬಂದಿ ಮೇಲೆ ಜಗತ್ತಿನ ಇತರೆಡೆ ನಡೆದ ದಾಳಿಗಳು ಮತ್ತು ಈ ಘಟನೆ ನಡುವೆ ಸಾಮ್ಯತೆಗಳಿವೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಅವರು ಹೇಳಿದರು.

ಈ ದಾಳಿಯು ಅರಬ್ ರಾಷ್ಟ್ರಗಳೊಂದಿಗೆ ಇಸ್ರೇಲ್ ಕೈಗೊಂಡಿರುವ ಶಾಂತಿ ಸ್ಥಾಪನೆ ಯತ್ನಗಳನ್ನು ಹಳಿ ತಪ್ಪಿಸುವ ಉದ್ದೇಶ ಹೊಂದಿದೆಯೇ ಎಂಬ ಪ್ರಶ್ನೆಗೆ, ‘ಪಶ್ಚಿಮ ಏಷ್ಯಾವನ್ನು ಅಸ್ಥಿರಗೊಳಿಸಲು ಯತ್ನಿಸುವವರು ಇಂತಹ ದಾಳಿಗಳಿಂದ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ’ ಎಂದರು.

ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಭಾರತೀಯ ಅಧಿಕಾರಿಗಳಿಗೆ ಇಸ್ರೇಲ್ ಅಧಿಕಾರಿಗಳು ಮತ್ತು ರಾಯಭಾರ ಕಚೇರಿ ಎಲ್ಲ ರೀತಿಯ ಸಹಾಯ ಹಾಗೂ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯ ಆಗಬಹುದಾದ ಎಲ್ಲವನ್ನೂ ತನಿಖಾಧಿಕಾರಿಗಳಿಗೆ ನೀಡುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.