ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕನ ಹುದ್ದೆಯಿಂದ ವಜಾಗೊಳಿಸಿದ್ದಾರೆ.
ಆಕಾಶ್ ಆನಂದ್ ಅವರನ್ನು ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಈ ಹುದ್ದೆಯಿಂದ ವಜಾಗೊಳಿಸಲಾಗಿದೆ. ಕಳೆದ ವರ್ಷ ಕೂಡ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿದ್ದ ಅವರು, ಕೆಲ ತಿಂಗಳ ಹಿಂದೆಯಷ್ಟೇ ಪಕ್ಷದ ರಾಷ್ಟ್ರೀಯ ಸಂಚಾಲಕರನ್ನಾಗಿ ಮರುನೇಮಕ ಮಾಡಿದ್ದರು.
ಆಕಾಶ್ ಆನಂದ್ ಅವರ ತಂದೆ ಆನಂದ್ ಕುಮಾರ್ ಮತ್ತು ಇನ್ನೊಬ್ಬ ಮುಖಂಡ ರಾಮ್‌ಜಿ ಗೌತಮ್ ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಕ ಮಾಡಿದ್ದಾರೆ.
ಮಾಯಾವತಿ ಅವರು ಈ ಹಿಂದೆ ಆಕಾಶ್ ಆನಂದ್ ಅವರ ಮಾವ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಅಶೋಕ್ ಸಿದ್ಧಾರ್ಥ್ ಅವರನ್ನು 'ಪಕ್ಷ ವಿರೋಧಿ' ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪಕ್ಷದಿಂದ ಉಚ್ಚಾಟಿಸಿದ್ದರು.
‘ನಾನು ಬದುಕಿರುವವರೆಗೂ ಉತ್ತರಾಧಿಕಾರಿಯನ್ನು ಘೋಷಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಸಂಬಂಧಗಳು ಮತ್ತು ಕುಟುಂಬವು ಪಕ್ಷದ ಹಿತಾಸಕ್ತಿಗಳಿಗಿಂತ ಮುಖ್ಯವಲ್ಲ. ನನಗೆ ಏನಿದ್ದರೂ ಪಕ್ಷ ಮೊದಲು’ ಎಂದು ಅವರು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಾಶ್ ಆನಂದ್ ಅವರನ್ನು ವಜಾಗೊಳಿಸಲು ಅಶೋಕ್ ಸಿದ್ಧಾರ್ಥ್ ಅವರೇ ಕಾರಣ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ‘ಆಕಾಶ್ ತೆಗೆದುಕೊಳ್ಳುವ ನಿರ್ಧಾರಗಳು ಅಶೋಕ್ ಸಿದ್ಧಾರ್ಥ್ ಅವರಿಂದ ಪ್ರಭಾವಿತವಾಗಿವೆ. ಅವರು ಆಕಾಶ್ ಆನಂದ್ ಅವರ ರಾಜಕೀಯ ಜೀವನವನ್ನು ಹಾಳು ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.