ADVERTISEMENT

ಮಿಜೋರಾಂ ವಿಧಾನಸಭೆ: ಮಹಿಳೆಯೇ ಇಲ್ಲ

ಪಿಟಿಐ
Published 13 ಡಿಸೆಂಬರ್ 2018, 18:30 IST
Last Updated 13 ಡಿಸೆಂಬರ್ 2018, 18:30 IST
   

ಐಜ್ವಾಲ್‌: ಮಿಜೋರಾಂನ ಮತದಾರರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು. ಆದರೆ, ವಿಧಾನಸಭೆಯಲ್ಲಿ ಒಬ್ಬ ಮಹಿಳೆಯೂ ಇಲ್ಲ. ಈ ಬಾರಿಯ ವಿಧಾನಸಭೆ ಚುನಾವಣಾ ಕಣದಲ್ಲಿ 15 ಮಹಿಳೆಯರಿದ್ದರು. ಈ ವರೆಗೆ ಇಷ್ಟೊಂದು ಸಂಖ್ಯೆಯ ಮಹಿಳೆಯರು ಸ್ಪರ್ಧಿಸಿಯೇ ಇರಲಿಲ್ಲ. ಸ್ಪರ್ಧಿಸಿದ್ದ ಎಲ್ಲ ಮಹಿಳೆಯರೂ ಸೋತಿದ್ದಾರೆ.

ಮಿಜೋರಾಂ ಸಮಾಜದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಬೇರೆ ಕಡೆಗಿಂತಲೂ ಹೆಚ್ಚು ಕಟ್ಟುನಿಟ್ಟಾಗಿದೆ. ಹಾಗಾಗಿ ಪ್ರಮುಖ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಡಲು ಹಿಂಜರಿದಿರುವುದೇ ಒಬ್ಬ ಮಹಿಳೆಯೂ ವಿಧಾನಸಭೆಗೆ ಹೋಗದಂತೆ ಮಾಡಿತು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

40 ಸದಸ್ಯ ಬಲದ ವಿಧಾನಸಭೆಯ 26 ಕ್ಷೇತ್ರಗಳಲ್ಲಿ ಗೆದ್ದಿರುವ ಮಿಜೋ ನ್ಯಾಷನಲ್ ಫ್ರಂಟ್‌ ಮಹಿಳೆಯರಿಗೆ ಟಿಕೆಟ್‌ ನೀಡಿರಲಿಲ್ಲ. ಈ ಬಾರಿ ಒಂದು ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಆರು ಮಹಿಳೆಯರಿಗೆ ಟಿಕೆಟ್‌ ನೀಡಿತ್ತು.

ADVERTISEMENT

ಸ್ಪರ್ಧಿಸಿದ್ದ 15 ಮಹಿಳೆಯರಿಗೆ ಸಿಕ್ಕ ಮತಗಳ ಮೊತ್ತ 3,991 ಮಾತ್ರ.2013ರ ಚುನಾವಣೆಯಲ್ಲಿ ಆರು ಮಹಿಳೆಯರು ಸ್ಪರ್ಧಿಸಿದ್ದರು. ಆಗಲೂ ಯಾರೂ ಗೆದ್ದಿರಲಿಲ್ಲ.

‘ಭವಿಷ್ಯದ ಪ್ರಧಾನಿ ಯೋಗಿ’

ಲಖನೌ: ‘ಮೋದಿ ಅವರು ಈಗ ಪ್ರಧಾನಿ, ಲೋಕಸಭಾ ಚುನಾವಣೆಯ ಬಳಿಕವೂ ಅವರೇ ಪ್ರಧಾನಿಯಾಗಿರುತ್ತಾರೆ. ಆದರೆ, ಯೋಗಿ ಅವರು ಭವಿಷ್ಯದ ಪ್ರಧಾನಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿಕಟವರ್ತಿ, ಶಾಸಕ ರಾಘವೇಂದ್ರ ಸಿಂಗ್‌ ಹೇಳಿದ್ದಾರೆ.

ಹಿಂದುತ್ವದ ಪ್ರಚಾರಕ್ಕಾಗಿ ಯೋಗಿ ಅವರು 16 ವರ್ಷಗಳ ಹಿಂದೆ ಸ್ಥಾಪಿಸಿದ ಹಿಂದೂ ಯುವವಾಹಿನಿಗೆ ರಾಘವೇಂದ್ರ ಅಧ್ಯಕ್ಷ.ರಾಘವೇಂದ್ರ ಅವರ ಹೇಳಿಕೆಯಿಂದ ಬಿಜೆಪಿಯ ಹಿರಿಯ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ. ಇದು ಅವರ ವೈಯಕ್ತಿಕಹೇಳಿಕೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.