ADVERTISEMENT

ನಕಲಿ ಡಿಜಿಟಲ್ ಅರೆಸ್ಟ್‌: ಹಿರಿಯ ವಕೀಲೆಯಿಂದ ₹3.29 ಕೋಟಿ ದೋಚಿದ ಸೈಬರ್ ಕಳ್ಳರು

ಪಿಟಿಐ
Published 3 ಜುಲೈ 2025, 3:13 IST
Last Updated 3 ಜುಲೈ 2025, 3:13 IST
   

ನೋಯ್ಡಾ: 72 ವರ್ಷದ ಹಿರಿಯ ವಕೀಲರನ್ನು ಹಲವು ದಿನಗಳವರೆಗೆ ನಕಲಿ ಡಿಜಿಟಲ್ ಅರೆಸ್ಟ್ ಮಾಡಿದ್ದ ಸೈಬರ್ ಖದೀಮರು ₹3.29 ಕೋಟಿ ದೋಚಿರುವ ಘಟನೆ ಉತ್ತರ ಪ್ರದೇಶದ ಗೌತಮ ಬದ್ಧ ನಗರದಲ್ಲಿ ನಡೆದಿದೆ.

ವಂಚನೆಗೊಳಗಾದ ವಕೀಲೆ ಹೇಮಂತಿಕಾ ವಾಹಿ ಜೂನ್ 10ರಂದು ದೂರು ದಾಖಲಿಸಿದ್ದಾರೆ.

ತನಗೆ ಒಂದು ಫೋನ್ ಕರೆ ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಬಳಸಿ ನಾಲ್ಕು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಮತ್ತು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಈ ಖಾತೆಗಳಲ್ಲಿ ಪತ್ತೆಯಾದ ಹಣವನ್ನು ಜೂಜಾಟ, ಬ್ಲ್ಯಾಕ್‌ಮೇಲಿಂಗ್, ಅಕ್ರಮ ಶಸ್ತ್ರಾಸ್ತ್ರ ಖರೀದಿ ಇತ್ಯಾದಿಗಳಿಗೆ ಬಳಸಲಾಗಿದೆ ಎಂದು ಹೇಳಿದ್ದಲ್ಲದೆ, ಒಂದು ಫೋನ್ ಸಂಖ್ಯೆಯನ್ನು ನೀಡಿದ್ದನು. ಆ ಸಂಖ್ಯೆಯನ್ನು ಸಂಪರ್ಕಿಸಿದಾಗ, ನೀವು ಗಂಭೀರ ಅಪರಾಧದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಸಲಾಗಿದೆ ಎಂದು ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ದೂರಿನ ಪ್ರಕಾರ, ಇದಾದ ನಂತರ ಆಕೆಗೆ ನಕಲಿ ಪೊಲೀಸ್ ಠಾಣೆಯಿಂದ ಕರೆಗಳು ಬರಲು ಪ್ರಾರಂಭಿಸಿದ್ದವು. ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಮೊತ್ತದ ವಿವರಗಳನ್ನು ಪಡೆದು ಪ್ರಕರಣದಿಂದ ಬಿಡುಗಡೆ ಮಾಡುವುದಾಗಿ ನಂಬಿಸಿ ಆಕೆಗೆ ₹3.29 ಕೋಟಿ ವಂಚಿಸಲಾಗಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಸೈಬರ್ ಅಪರಾಧಿಗಳು 75 ವರ್ಷದ ವ್ಯಕ್ತಿಯನ್ನು 12 ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿಟ್ಟು ಅವರಿಗೆ ₹49.5 ಲಕ್ಷ ವಂಚಿಸಿದ್ದಾರೆ.

ನೋಯ್ಡಾದ ಸೆಕ್ಟರ್ 29ರ ನಿವಾಸಿ ರಾಜೀವ್ ಕುಮಾರ್ ಅವರು ಮಂಗಳವಾರ ರಾತ್ರಿ ದೂರು ದಾಖಲಿಸಿದ್ದಾರೆ ಎಂದು ಸೈಬರ್ ಅಪರಾಧ ವಿಭಾಗದ ಉಪ ಆಯುಕ್ತೆ ಪ್ರೀತಿ ಯಾದವ್ ತಿಳಿಸಿದ್ದಾರೆ. ಜೂನ್ 18ರಂದು ತಮ್ಮ ಸ್ಥಿರ ದೂರವಾಣಿಗೆ ಕರೆ ಬಂದಿತ್ತು ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಫೋನ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಬಳಸಿ ನಾಲ್ಕು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಕರೆ ಮಾಡಿದವರು ಹೇಳಿದ್ದು, ಇವುಗಳನ್ನು ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವರ್ಗಾವಣೆಗೆ ಬಳಸಲಾಗುತ್ತಿದೆ ಎಂದು ಬೆದರಿಕೆ ಹಾಕಿದ್ದರು. ಜೂನ್ 18 ರಿಂದ ಜೂನ್ 30ರವರೆಗೆ ಅವರನ್ನು ನಕಲಿ ಡಿಜಿಟಲ್ ಬಂಧನದಲ್ಲಿ ಇರಿಸಲಾಗಿತ್ತು. ಬಳಿಕ ಪ್ರಕರಣದಲ್ಲಿ ಪಾರು ಮಾಡುವುದಾಗಿ ನಂಬಿಸಿ ₹49.50 ಲಕ್ಷ ದೋಚಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.