ಬಂಧನ
ನೊಯಿಡಾ: ತನ್ನ ಮೇಲೆ ಪ್ರಕರಣ ದಾಖಲಿಸಿದ್ದ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು, ಆತನ ಹೆಸರನ್ನು ಬಳಸಿಕೊಂಡು ‘ಲಷ್ಕರ್ ಎ ಜಿಹಾದಿ’ ಸಂಘಟನೆಯ ಹೆಸರನ್ನು ನಮೂದಿಸಿ ಮುಂಬೈನ ಸಂಚಾರ ವಿಭಾಗದ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಅಶ್ವಿನಿ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಾರ್ ಅವರು ತಮ್ಮನ್ನು ತಾವು ಜ್ಯೋತಿಷಿ ಮತ್ತು ವಾಸ್ತುಶಾಸ್ತ್ರಜ್ಞ ಎಂದು ಕರೆದುಕೊಳ್ಳುತ್ತಾರೆ. ಇವರು ಪಟ್ನಾದವರಾಗಿದ್ದು, 5 ವರ್ಷಗಳಿಂದ ನೊಯಿಡಾದಲ್ಲಿ ವಾಸಿಸುತ್ತಿದ್ದಾರೆ. ಇವರ ಸ್ನೇಹಿತ ಇವರ ವಿರುದ್ಧ 2023ರಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕುಮಾರ್ ಅವರು 3 ತಿಂಗಳು ಜೈಲುವಾಸ ಅನುಭವಿಸಿದ್ದರು.
‘14 ಭಯೋತ್ಪಾದಕರು 34 ವಾಹನಗಳಲ್ಲಿ 400 ಕೆ.ಜಿ ಆರ್‌ಡಿಎಕ್ಸ್ ಇಟ್ಟುಕೊಂಡು ಮುಂಬೈ ಪ್ರವೇಶಿಸಿದ್ದಾರೆ’ ಎಂದು ಪೊಲೀಸರ ವಾಟ್ಸ್‌ಆ್ಯಪ್ ಸಂಖ್ಯೆಗೆ ಕುಮಾರ್ ಅವರು ಗುರುವಾರ ಸಂದೇಶ ಕಳುಹಿಸಿದ್ದಾರೆ. ಅನಂತ ಚತುದರ್ಶಿ ಸಂಭ್ರಮಾಚರಣೆಯ ಸನಿಹದಲ್ಲೇ ಈ ಸಂದೇಶ ಕಳುಹಿಸಲಾಗಿದೆ.
ಸಂದೇಶ ಬರುತ್ತಿದ್ದಂತೆಯೇ ಮುಂಬೈ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಸಂದೇಶವು ನೊಯಿಡಾದಿಂದ ಬಂದಿದ್ದಾಗಿ ಪೊಲೀಸರಿಗೆ ತಿಳಿದುಬಂದಿದೆ. ಇದನ್ನು ಆಧರಿಸಿ ನೊಯಿಡಾ ಪೊಲೀಸರು ಕುಮಾರ್ ಅವರನ್ನು ಬಂಧಿಸಿದ್ದಾರೆ. ಬಳಿಕ ಇವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ನೊಯಿಡಾದ ಹೆಚ್ಚುವರಿ ಡಿಸಿಪಿ ಸುಮಿತ್ ಶುಕ್ಲಾ ಮಾಹಿತಿ ನೀಡಿದರು. ವೈಯಕ್ತಿಕ ದ್ವೇಷದಿಂದಲೇ ಈ ಕೃತ್ಯ ಎಸಗಿದ್ದಾಗಿ ತನಿಖೆ ವೇಳೆ ಕುಮಾರ್ ಅವರು ತಪ್ಪೊಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.