ADVERTISEMENT

ನೊಯಿಡಾದಲ್ಲಿ ಅವಳಿ ಗೋಪುರ ನೆಲಸಮ: ಮನೆಗಳಿಗೆ ಮರಳಿದ ನಿವಾಸಿಗಳು

ಪಿಟಿಐ
Published 29 ಆಗಸ್ಟ್ 2022, 19:37 IST
Last Updated 29 ಆಗಸ್ಟ್ 2022, 19:37 IST
ಅವಳಿ ಕಟ್ಟಡ ನೆಲಸಮಗೊಂಡಿರುವ ಸ್ಥಳದಲ್ಲಿ ಕಂಡುಬಂದ ಅವಶೇಷಗಳು
ಅವಳಿ ಕಟ್ಟಡ ನೆಲಸಮಗೊಂಡಿರುವ ಸ್ಥಳದಲ್ಲಿ ಕಂಡುಬಂದ ಅವಶೇಷಗಳು   

ನೊಯಿಡಾ: ಸೂಪರ್‌ಟೆಕ್‌ ಸಂಸ್ಥೆಯ ಅವಳಿ ಗೋಪುರಗಳ ನೆಲಸಮ ಸಂದರ್ಭದಲ್ಲಿ ಮನೆ ತೆರವು ಮಾಡಿದ್ದ ಎಟಿಎಸ್‌ ವಿಲೇಜ್‌ನ ಶೇ 75ರಷ್ಟು ಮಂದಿ ಮತ್ತು ಎಮರಾಲ್ಡ್‌ ಗೋಲ್ಡ್‌ನ ಅರ್ಧದಷ್ಟು ಮಂದಿ ಸೋಮವಾರ ಸಂಜೆಯ ಹೊತ್ತಿಗೆ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ.

ಎಟಿಎಸ್‌ ವಿಲೇಜ್‌ ಮತ್ತು ಎಮ ರಾಲ್ಡ್ ಗೋಲ್ಡ್‌ ಅಪಾರ್ಟ್‌ಮೆಂಟ್‌ಗಳು ಅವಳಿ ಗೋಪುರಗಳಿದ್ದ ಸ್ಥಳದಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿವೆ.

ಒಂದು ಗೋಪುರದ ತುತ್ತತುದಿಯ ಮೂರು ಮಹಡಿಗಳ ಬೃಹತ್‌ ಭಾಗ ವೊಂದು ಎಟಿಎಸ್‌ ವಿಲೇಜ್‌ನ ಆವರಣ ಗೋಡೆಯ ಮೇಲೆ ಬಿದ್ದಿದೆ. ಗೋಡೆಯು ಸುಮಾರು ಒಂಬತ್ತು ಮೀಟರ್‌ಗಳಷ್ಟು ಹಾನಿಗೊಂಡಿದೆ. ಇದನ್ನು ಸರಿಪಡಿಸಲು ಒಂದು ವಾರ ಬೇಕು ಎನ್ನಲಾಗಿದೆ.

ADVERTISEMENT

‘ಕಟ್ಟಡದ ಈ ಭಾಗವು ಎಟಿಎಸ್‌ ವಿಲೇಜ್‌ನ ಆವರಣ ಗೋಡೆಯ ಮೇಲೆ ಬೀಳಲಿದೆ ಎಂಬುದನ್ನು ಮೊದಲೇ ಅಂದಾಜು ಮಾಡಲಾಗಿತ್ತು. ತ್ಯಾಜ್ಯವು ಚೆದುರಿ ಹೋಗಬಹುದು ಎಂದು ಗುರುತಿಸಿದ್ದ ಪ್ರದೇಶದೊಳಗೆ ಈ ಆವರಣ ಗೋಡೆ ಇದೆ’ ಎಂದು ಎಡಿಫೈಸ್‌ ಎಂಜಿನಿಯರಿಂಗ್‌ನ ಯೋಜನಾ ವ್ಯವಸ್ಥಾಪಕ ಮಯೂರ್‌ ಮೆಹ್ತಾ ಹೇಳಿದ್ದಾರೆ.

ಅವಳಿ ಗೋಪುರಗಳ ನೆಲಸಮದ ನಂತರದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಎಟಿಎಸ್‌ ವಿಲೇಜ್‌ ಮತ್ತು ಎಮರಾಲ್ಡ್‌ ಗೋಲ್ಡ್‌ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳ ಅಧ್ಯಕ್ಷರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಲಾದ ಅವಳಿ ಗೋಪುರಗಳ ಸಮೀಪದಲ್ಲಿಯೇ ಇರುವ ಈ ಎರಡು ವಸತಿ ಸಮುಚ್ಚಯಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ವಿಶೇಷ ತಂತ್ರಜ್ಞಾನ ಬಳಸಿ 12 ಸೆಕೆಂಡ್‌ಗಳಲ್ಲಿ ಈ ಅವಳಿ ಗೋಪುರಗಳನ್ನು ನೆಲಸಮ ಮಾಡಲಾಗಿತ್ತು. ಸಾವಿರಾರು ಟನ್‌ ತ್ಯಾಜ್ಯ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.